ಕದ್ದ ಬೈಕ್ ನಲ್ಲಿ ಗರ್ಲ್ ಫ್ರೆಂಡ್ ಜೊತೆ ಸುತ್ತಾಟ..! ಯುವಕನನ್ನು ಬೆನ್ನಟ್ಟಿ ಹಿಡಿದ ಪೊಲೀಸರು

Share with

ಕಾಸರಗೋಡು: ಕದ್ದ ಬೈಕ್‌ನಲ್ಲಿ ತನ್ನ ಗೆಳತಿಯೊಂದಿಗೆ ಸುತ್ತಾಟ ನಡೆಸಿದ ಯುವಕ ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಚೆರುವತ್ತೂರಿನಲ್ಲಿ ಸಂಭವಿಸಿದೆ.

ದಾರಿ ಕೇಳಲು ಯುವಕ ಪೊಲೀಸರನ್ನು ಸಂಪರ್ಕಿಸಿದ್ದ. ಬಳಿಕ ಬೈಕ್‌ನ ಬಗ್ಗೆ ಅನುಮಾನಗೊಂಡ ಪೊಲೀಸರು ಯುವಕನನ್ನು ಬೆನ್ನಟ್ಟಿ ಹಿಡಿದ ಘಟನೆ ನಡೆಯಿತು.

ರಾತ್ರಿ ಹೊತ್ತು ಕೊಟ್ಟಣಚ್ಚೇರಿ ದೇವಸ್ಥಾನದ ಸಮೀಪ ಕಾಸರಗೋಡು ಎಆರ್ ಕ್ಯಾಂಪ್‌ನಲ್ಲಿ ಕೆಲಸ ಮಾಡುತ್ತಿರುವ ಸುನೀಶ್ ಅವರ ಬಳಿ ಬೈಕ್‌ನಲ್ಲಿ ಬಂದ ವ್ಯಕ್ತಿ ಕಾಂಞಂಗಾಡ್‌ಗೆ ಹೋಗುವ ದಾರಿ ಮತ್ತು ದೂರವನ್ನು ಹಿಂದಿಯಲ್ಲಿ ವಿಚಾರಿಸಿದ್ದ. ದಾರಿ ತಿಳಿಸಿಕೊಡುವ ವೇಳೆ ಬೈಕ್‌ನ ನೋಂದಣಿ ಸಂಖ್ಯೆ ಹಾಗೂ ಯುವಕನ ವರ್ತನೆಯ ಬಗ್ಗೆ ಸುನೀಶ್‌ಗೆ ಅನುಮಾನ ಮೂಡಿತ್ತು. ಹೀಗಾಗಿ ಬೈಕ್‌ನ ಸಂಖ್ಯೆಯನ್ನು ನೆನಪಿಟ್ಟುಕೊಂಡ ಅವರು, ಬೈಕ್ ಅಲ್ಲಿಂದ ತೆರಳಿದ ಕೂಡಲೇ ಕಾಸರಗೋಡು ಕಂಟ್ರೋಲ್ ರೂಮ್‌ನ ಪೊಲೀಸರನ್ನು ಸಂಪರ್ಕಿಸಿ ನೋಂದಣಿ ಸಂಖ್ಯೆಯನ್ನು ಪರಿಶೀಲಿಸುವಂತೆ ಕೇಳಿಕೊಂಡರು.

ಪರಿಶೀಲಿಸಿದಾಗ, ಎರಡು ದಿನಗಳ ಹಿಂದೆ ವಡಕರದಿಂದ ಕಳವಾಗಿದ್ದ ಬೈಕ್‌ನ ನೋಂದಣಿ ಸಂಖ್ಯೆ ಅದೇ ಎಂಬುದು ದೃಢಪಟ್ಟಿತು. ಸುನೀಶ್ ತಮ್ಮ ಬೈಕ್‌ನಲ್ಲಿ ಯುವಕನನ್ನು ಬೆನ್ನಟ್ಟಿ ಚೆರುವತ್ತೂರಿನಲ್ಲಿ ಹಿಡಿಯುವಲ್ಲಿ ಯಶಸ್ವಿಯಾದರು.

ಕಳವಾದ ಬೈಕ್ ಹಾಗೂ ಆರೋಪಿಯನ್ನು ಚಂದೇರ ಪೊಲೀಸರು ವಶಕ್ಕೆ ಪಡೆದು ವಡಕರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ತಾನು ಬೇರೊಬ್ಬರಿಂದ ಬೈಕ್ ಪಡೆದಿರುವುದಾಗಿ ಆರೋಪಿ ಸದ್ಯ ಹೇಳಿಕೆ ನೀಡಿದ್ದಾನೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *