ಬಿಹಾರ: ಇಲ್ಲಿನ ಭಾಗಲ್ಪುರ ಜಿಲ್ಲೆಯ ಶಿವನಾರಾಯಣಪುರ ರೈಲ್ವೆ ನಿಲ್ದಾಣದಲ್ಲಿ ಮೊಬೈಲ್ ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬನಿಗೆ ಪ್ರಯಾಣಿಕರು ತಕ್ಕ ಪಾಠ ಕಲಿಸಿದ ಘಟನೆ ನಡೆದಿದೆ.
ರೈಲಿನ ಕಿಟಕಿ ಬಳಿ ಕುಳಿತಿದ್ದ ಪ್ರಯಾಣಿಕರೊಬ್ಬರ ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ಕದ್ದು ಪರಾರಿಯಾಗಲು ಕಳ್ಳ ಯತ್ನಿಸಿದ್ದನು. ಆದರೆ, ಆತ ಫೋನ್ ಕಸಿಯುತ್ತಿದ್ದಂತೆ ಜಾಗರೂಕರಾದ ಪ್ರಯಾಣಿಕರು ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಇದೇ ವೇಳೆ ರೈಲು ಮುಂದೆ ಸಾಗಿದ್ದು ಕಳ್ಳನು ಕಿಟಕಿಯ ಹೊರಭಾಗದಲ್ಲೇ ಜೋತಾಡಿದ್ದಾನೆ.
ಬೀಳುವ ಭಯದಿಂದ ತನ್ನನ್ನು ಬಿಟ್ಟುಬಿಡುವಂತೆ ಆ ವ್ಯಕ್ತಿ ಪ್ರಯಾಣಿಕರಲ್ಲಿ ಗೋಗರೆದಿದ್ದಾನೆ. ರೈಲು ಪ್ಲಾಟ್‌ಫಾರ್ಮ್ ಕೊನೆಯ ಭಾಗಕ್ಕೆ ತಲುಪುತ್ತಿದ್ದಂತೆ ಆತನಿಗೆ ಹಿಡಿತ ಸಿಗದೆ ಪ್ಲಾಟ್‌ಫಾರ್ಮ್‌ನ ತುದಿಯಲ್ಲಿ ಕೆಳಗೆ ಬಿದ್ದಿದ್ದಾನೆ. ತಕ್ಷಣವೇ ಅಲ್ಲಿದ್ದ ರೈಲ್ವೆ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.





