ನವದೆಹಲಿ: ಮಾರಾಟ ಮಾಡಿದ ಕಾರನ್ನು ಜಿಪಿಎಸ್ ಟ್ರ್ಯಾಕಿಂಗ್ ಸಾಧನ ಹಾಗೂ ತನ್ನ ಬಳಿಯೇ ಉಳಿಸಿಕೊಂಡಿದ್ದ ಮೂರನೇ ಕೀ ಬಳಸಿ ಸ್ನೇಹಿತನೊಂದಿಗೆ ಸೇರಿ ಮರಳಿ ಕಳವು ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು ಯೋಗೇಶ್ ದಹಿಯಾ ಮತ್ತು ಸಾಹಿಲ್ ರೋಹಿಲ್ಲಾ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಳವು ಮಾಡಿದ್ದ ಕಾರು ಹಾಗೂ 89,500 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಕಾರನ್ನು ಮಾರಾಟ ಮಾಡುವ ಮೊದಲೇ ಆರೋಪಿ ಅದರಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ಸಾಧನ ಅಳವಡಿಸಿದ್ದ. ಅಲ್ಲದೆ, ಕಾರಿನ ಮೂರನೇ ಕೀಯನ್ನು ತನ್ನ ಬಳಿಯೇ ಉಳಿಸಿಕೊಂಡಿದ್ದ. ಬಳಿಕ ಸ್ನೇಹಿತನೊಂದಿಗೆ ಸೇರಿ ಕಾರನ್ನು ಮರಳಿ ಕಳವು ಮಾಡಲು ಸಂಚು ರೂಪಿಸಿದ್ದ ಎನ್ನಲಾಗಿದೆ.
ಅಕ್ಟೋಬರ್ 8ರಂದು ದಿಲ್ಲಿಯ ದಿಲ್ಶಾದ್ ಗಾರ್ಡನ್ನಲ್ಲಿ ನಿಲ್ಲಿಸಿದ್ದ ಕಾರು ಕೇವಲ ನಾಲ್ಕು ನಿಮಿಷಗಳಲ್ಲೇ ಕಳವಾಗಿತ್ತು. ಕಾರಿನೊಳಗೆ 2 ಲಕ್ಷ ರೂ. ನಗದು ಇರಿಸಿದ್ದಾಗಿ ದೂರುದಾರರು ಪೊಲೀಸರಿಗೆ ತಿಳಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳವಾದ ಕಾರು ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.





