ಬಂಟ್ವಾಳ: ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಎಂಟು ಮಂದಿ ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ದೂರು ದಾಖಲಾದ ಘಟನೆ ಬಂಟ್ವಾಳ ನಗರ ಠಾಣೆಯಲ್ಲಿ ಅ.30ರಂದು ನಡೆದಿದೆ.
ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮ ಪಂಚಾಯತ್ ಪಿಡಿಒ ಲಕ್ಷ್ಮಣ್ ಅವರು ಅಧಿಕಾರ ದುರುಪಯೋಗ ಪಡಿಸುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ಎಸ್.ಡಿ.ಪಿ.ಐ ಬೆಂಬಲಿತ ಎಂಟು ಮಂದಿ ಸದಸ್ಯರುಗಳು ಅ.30ರಂದು ಗ್ರಾಮಪಂಚಾಯತ್ ಗೆ ಮುತ್ತಿಗೆ ಹಾಕಿದ್ದರು.
ಈ ಸಂದರ್ಭ ಪಂಚಾಯತ್ ಸಿಬ್ಬಂದಿಗಳಾದ ಮೀನಾಕ್ಷಿ, ಮಹಮ್ಮದ್ ಹಾರಿಶ್, ನಳಿನಿ, ಸುಮನಾ ಅವರನ್ನು ಕಚೇರಿಯೊಳಗೆ ಹೋಗದಂತೆ ತಡೆದು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೇ ಕಚೇರಿಯ ಬೀಗದ ಕೀಯನ್ನು ಬಲವಂತವಾಗಿ ಕಸಿದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ನಲ್ಲಿ ಈ ಘಟನೆ ನಡೆದಿದ್ದು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬೂಬಕ್ಕರ್ ಸಿದ್ದೀಕ್, ಜಮಾಲುದ್ದೀನ್, ಫಾತಿಮಾ ಸೌನ್, ಫೌಝಿಯಾ, ಸಬೀನಾ, ರಝಿಯಾ, ಸಾಜಿದ್, ವಹಿದಾ ಬಾನು ಎಂಬವರ ವಿರುದ್ಧ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಪಿಡಿಒ ಲಕ್ಷ್ಮಣ್ ಅವರು ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.