ನವದೆಹಲಿ: ಭವಿಷ್ಯ ನಿಧಿ (ಪಿಎಫ್) ಖಾತೆದಾರರಿಗೆ, ನೌಕರರ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ವಾಟ್ಸ್ಆ್ಯಪ್ ಸೇವೆಯನ್ನು ಆರಂಭಿಸಿದೆ. ಇಪಿಎಫ್ಒದ 74ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಈ ಸೇವೆಗೆ ಚಾಲನೆ ನೀಡಿದರು.
ವಾಟ್ಸ್ಆ್ಯಪ್ ಮೂಲಕ ಪಿಎಫ್ ಖಾತೆದಾರರು ತಮ್ಮ ಖಾತೆಯಲ್ಲಿರುವ ಹಣದ ಬ್ಯಾಲೆನ್ಸ್, ಪಾಸ್ಬುಕ್ನ ಮಾಹಿತಿ ಹಾಗೂ ಕಳೆದ 5 ಹಣದ ವಹಿವಾಟಿನ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಜತೆಗೆ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್ಗಾರ್ ಯೋಜನೆ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಬಹುದು. ಅಲ್ಲದೆ ಆಧಾರ್ ಕಾರ್ಡ್ ಪರಿಶೀಲಿಸಲಾದ ನಿಷ್ಕ್ರಿಯಗೊಂಡ ಪಿಎಫ್ ಖಾತೆಗಳನ್ನು ಹೊಂದಿರುವವರು, 1000 ರೂ.ವರೆಗಿನ ಬ್ಯಾಲೆನ್ಸ್ ಹೊಂದಿರುವವರು ತಮ್ಮ ಬಾಕಿ ಹಣವನ್ನು ಹಿಂಪಡೆಯಬಹುದು.




