
ಮಂಗಳೂರು: ಬಿಜೆಪಿ ಆಡಳಿತಾವಧಿಯ ಮರಳು ನೀತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಮರಳು ಸಮಸ್ಯೆ ಎದುರಾಗಲು ಕಾರಣವಾಗಿದೆ. ಇದರಲ್ಲಿ ಕಾಂಗ್ರೆಸ್ ಸರ್ಕಾರದ ತಪ್ಪಿಲ್ಲ ಎಂದು ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರು ವಾಗ್ಧಾಳಿ ನಡೆಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯು.ಟಿ ಖಾದರ್ ಸಚಿವರಾಗಿದ್ದಾಗ ಸ್ಯಾಂಡ್ ಬಜಾರ್ ಆಪ್ ಮಾಡಿ ಕಡಿಮೆ ಬೆಲೆಗೆ ಕ್ಲಪ್ತ ಸಮಯದಲ್ಲಿ ಮರಳು ಸಿಗುವಂತೆ ಮಾಡಿದ್ದರು. ಅದನ್ನು ನಿಲ್ಲಿಸಿದ್ದು ಯಾಕೆ? ನಿಲ್ಲಿಸಿದ್ದು ಯಾರು? ಬಿಜೆಪಿ ಅವಧಿಯಲ್ಲಿ ಸ್ವತಃ ರಾಜ್ಯಾಧ್ಯಕ್ಷರು 2 ಸಾವಿರ ರೂಪಾಯಿಗೆ ಒಂದು ಲೋಡ್ ಮರಳು ನೀಡುವುದಾಗಿ ಹೇಳಿದ್ದರು. ಅದನ್ನು ಅನುಷ್ಠಾನ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ಆಸ್ಕರ್ ಫರ್ನಾಂಡಿಸ್ ಕೇಂದ್ರ ಸಚಿವರಾಗಿದ್ದಾಗ ಸಿಆರ್ಝಡ್ನ ಕೆಲವು ನಿಯಮಗಳನ್ನು ಸರಳೀಕರಣ ಮಾಡಿದ್ದರು. ಆದರೆ 10 ವರ್ಷ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಈ ಬಗ್ಗೆ ಯಾವ ಪ್ರಯತ್ನವನ್ನೂ ಮಾಡಿಲ್ಲ. ಈಗ ಆರೋಪ ಮಾಡುವ ಬಿಜೆಪಿ ಶಾಸಕರು ತಮ್ಮ ಸರ್ಕಾರವೇ ಅಧಿಕಾರದಲ್ಲಿದ್ದಾಗ ಈ ಬಗ್ಗೆ ಒಂದು ಸಲವಾದರೂ ನಿಯೋಗ ತೆರಳಿ ಪ್ರಶ್ನೆ ಮಾಡಿದ್ದರೇ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡರಾದ ಪದ್ಮನಾಭ ನರಿಂಗಾನ, ಟಿ.ಕೆ. ಸುಧೀರ್, ಗಣೇಶ್ ಪೂಜಾರಿ, ಅಬ್ದುಲ್ ಸಲೀಂ, ಶುಭೋದಯ ಆಳ್ವ, ಪ್ರಕಾಶ್ ಸಾಲ್ಯಾನ್, ಲಾರೆನ್ಸ್ ಡಿಸೋಜ, ಸುಭಾಶ್ ಶೆಟ್ಟಿ, ನೀರಜ್ ಪಾಲ್, ಯೋಗೇಶ್ ಕುಮಾರ್ ಇದ್ದರು.





