ಪಟಾಕಿ ಮಾರಾಟ ಮಳಿಗೆ ನಿಯಮಾವಳಿಗೆ ಶಾಸಕ ವೇದವ್ಯಾಸ್ ಕಾಮತ್‌ ಆಕ್ರೋಶ!

Share with

ಮಂಗಳೂರು: ಪಟಾಕಿ ಮಾರಾಟಕ್ಕೆ ಸಂಬಂಧಿಸಿ ಹೊಸ ನಿಯಮಾವಳಿ ರೂಪೀಕರಿಸಿದ ಬಗ್ಗೆ ಶಾಸಕ ಡಿ. ವೇದವ್ಯಾಸ್ ಕಾಮತ್‌ ಅವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪಟಾಕಿ ಮಾರಾಟಕ್ಕೆ ಸಂಬಂಧಿಸಿ ಹೊಸ ನಿಯಮಾವಳಿ ರೂಪೀಕರಿಸಿದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಡಿ. ವೇದವ್ಯಾಸ್ ಕಾಮತ್‌ ಅವರು ದೀಪಾವಳಿಯ ಸಂದರ್ಭದಲ್ಲಿಯೇ ಇಲ್ಲಸಲ್ಲದ ನಿಯಮಾವಳಿಗಳನ್ನು ಹೇರಿ ರಾಜ್ಯದ ಕಾಂಗ್ರೆಸ್‌ ಸರಕಾರ ಗೊಂದಲ ಸೃಷ್ಟಿಸಿ ಹಿಂದೂಗಳ ಭಾವನೆಗಳಿಗೆ ಘಾಸಿ ಉಂಟು ಮಾಡುತ್ತಿದೆ.

ಮಂಗಳೂರಿನಲ್ಲಿ ದೀಪಾವಳಿ ಸಂದರ್ಭ ಪಟಾಕಿ ಮಾರಾಟ ಮಳಿಗೆಯನ್ನು ತೆರೆಯಲು ಈ ಬಾರಿ ಕೇವಲ ಮೂರ್ನಾಲ್ಕು ಮೈದಾನದಲ್ಲಿ ಮಾತ್ರ ಅವಕಾಶವನ್ನು ನೀಡಲಾಗಿದೆ. ಬೈಕಂಪಾಡಿ ಎಪಿಎಂಸಿ, ಕೇಂದ್ರ ಮೈದಾನ, ಪಚ್ಚನಾಡಿ, ಬೊಂದೆಲ್ ಸೇರಿದಂತೆ ಕೆಲವೇ ಮೈದಾನಗಳಲ್ಲಿ ಸ್ಥಳ ಗುರುತಿಸಲಾಗಿದೆ. ಆದರೆ ಎಷ್ಟೋ ಕಡೆಗಳಲ್ಲಿ ಮೈದಾನಗಳೇ ಇಲ್ಲ. ಹಾಗಾದರೆ ಈ ಹಿಂದೆ ಅಲ್ಲಿ ಪಟಾಕಿ ಅಂಗಡಿಗಳನ್ನು ಹಾಕುತ್ತಿದ್ದವರು ಈಗ ಎಲ್ಲಿ ಹೋಗಬೇಕು ಎಂಬ ಪ್ರಶ್ನೆಗೆ ಯಾರಲ್ಲಿಯೂ ಉತ್ತರವಿಲ್ಲ.

ಹಿಂದೂಗಳ ಹಬ್ಬದ ಸಮಯದಲ್ಲಿ ದಿಢೀರನೆ ಚಾಲನೆಗೆ ಬರುವ ನಿಯಮಗಳು ಮತ್ತು ಕಡಿವಾಣಗಳು ಇನ್ನಿತರ ಯಾವುದೇ ಧರ್ಮಗಳ ಹಬ್ಬದ ಸಂದರ್ಭದಲ್ಲಿ ಕಂಡು ಬರುವುದಿಲ್ಲ. ಅವರ ಪೌರುಷ ಕೇವಲ ಹಿಂದೂಗಳ ಮೇಲೆ ಮಾತ್ರ. ಹಿಂದೂಗಳಿಗೆ ಏನು ಬೇಕಾದರೂ ಅನ್ಯಾಯ ಮಾಡಿ ಕೆಲವೊಂದಿಷ್ಟು ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೆ ಅವರು ಸುಮ್ಮನಾಗುತ್ತಾರೆ ಎಂದು ಕಾಂಗ್ರೆಸ್ ಸರಕಾರ ಭಾವಿಸಿದ್ದರೆ ಅದು ಅವರ ಮೂರ್ಖತನ. ಪಟಾಕಿ ಮಳಿಗೆ ಕುರಿತಂತೆ ಹೊಸ ನಿಯಮಾವಳಿ ರಚಿಸಿರುವುದು ರಾಜ್ಯದ ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಮರೆ ಮಾಚಲು ಮಾಡಿರುವ ಯತ್ನವಾಗಿದೆ ಎಂದು ಆರೋಪಿಸಿದರು.

ಈಗಾಗಲೇ ಜಿಲ್ಲಾಡಳಿತ ಸೂಚಿಸಿರುವ ಕೇವಲ ಮೂರ್ನಾಲ್ಕು ಮೈದಾನಗಳಲ್ಲದೇ ಹೆಚ್ಚುವರಿ ಮೈದಾನಗಳಲ್ಲಿ ತಾತ್ಕಾಲಿಕ ಪಟಾಕಿ ಮಳಿಗೆ ಹಾಕಲು ಅವಕಾಶ ಮಾಡಿ ಕೊಡುವಂತೆ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಪಾಲಿಕೆ ಆಯುಕ್ತರು ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಸಲ್ಲಿಸಲಾಗಿದ್ದು ಅದಕ್ಕೆ ಅವಕಾಶ ಮಾಡಿ ಕೊಡಬೇಕೆಂದು ಒತ್ತಾಯಿಸಿದರು.


Share with

Leave a Reply

Your email address will not be published. Required fields are marked *