ಬೆಂಗಳೂರು: ನ.30ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ 262 ಹೊಸ ಅಂಬ್ಯುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಿದರು.


82.02 ಕೋಟಿ ರೂಪಾಯಿ ವೆಚ್ಚದಲ್ಲಿ 262 ಆಂಬ್ಯುಲೆನ್ಸ್ ಗಳು ಖರೀದಿಸಲಾಗಿದೆ. 262 ಪೈಕಿ 157 ಅಂಬ್ಯುಲೆನ್ಸ್ಗಳಲ್ಲಿ BLS (ಬೇಸಿಕ್ ಲೈಫ್ ಸಪೋರ್ಟ್) ಹಾಗೂ 105 ಅಂಬ್ಯುಲೆನ್ಸ್ ಅಡ್ವಾನ್ಸ್ ಲೈಫ್ ಸಪೋರ್ಟ್(ALS) ಸೌಲಭ್ಯವಿದ್ದು, ಹೃದಯ ಮತ್ತು ಉಸಿರಾಟದ ತುರ್ತು ಪರಿಸ್ಥಿಗಳಲ್ಲಿ ಇವು ಸಹಕರಿಯಾಗಿವೆ.
ಆಂಬ್ಯುಲೆನ್ಸ್ಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಜಯದೇವ ಆಸ್ಪತ್ರೆಯಲ್ಲಿರುವ ಗುಣಮಟ್ಟದ ಆರೋಗ್ಯ ಸೇವೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗಬೇಕು ಎನ್ನುವುದು ನಮ್ಮ ಸರ್ಕಾರದ ಗುರಿ. ಹಳೆ ಬಟ್ಟೆ-ಕೊಳಕು ಬಟ್ಟೆ ಹಾಕಿಕೊಂಡು ಬರುವ ಬಡವರನ್ನೂ ಮಾನವೀಯವಾಗಿ ನಡೆಸಿಕೊಂಡು ತಾರತಮ್ಯ ಇಲ್ಲದ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದರು.
ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದವಾಗಿದೆ. ಚಿಕಿತ್ಸೆ ಸಿಗದೆ ಯಾರೂ ಪ್ರಾಣ ಕಳೆದುಕೊಳ್ಳುವಂಥಾಗಬಾರದು ಎನ್ನುವ ಕಾರಣಕ್ಕೇ ತುರ್ತು 108 ಅಂಬ್ಯುಲೆನ್ಸ್ ಗಳನ್ನು ಆರೋಗ್ಯ ಸೇವೆಗೆ ಒದಗಿಸಲಾಗಿದೆ. ರಾಜ್ಯದಲ್ಲಿ 840ಕ್ಕೂ ಹೆಚ್ಚು ಅಂಬ್ಯುಲೆನ್ಸ್ ಗಳ ಅಗತ್ಯವಿದೆ. ಪ್ರತೀ ತಾಲ್ಲೂಕಿನಲ್ಲಿ 4 ಅಂಬ್ಯುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಾ ಪ್ರತೀ ದಿನ ನೂರಾರು ಮಂದಿಗೆ ತುರ್ತು ಆರೋಗ್ಯ ಸೇವೆ ಒದಗಿಸುತ್ತಿವೆ. ಪ್ರಾಥಮಿಕ ತುರ್ತು ಚಿಕಿತ್ಸೆ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಪ್ರತೀ ಜಿಲ್ಲೆಯಲ್ಲಿ MRI ಸ್ಕ್ಯಾನಿಂಗ್ ಸೌಲಭ್ಯ ಇರಬೇಕು. ಖಾಸಗಿ ಡಯಾಗ್ನೊಸ್ಟಿಕ್ ಸೆಂಟರ್ ಗಳಲ್ಲಿ ಸೇವಾವೆಚ್ಚ ದುಬಾರಿ ಆಗಿರುವುದರಿಂದ ಬಡವರಿಗೆ ಬಹಳ ಕಷ್ಟ ಆಗುತ್ತಿದೆ. ಈ ಕಾರಣಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಾವಿರಾರು ಮಂದಿ ಬೇಡಿಕೆ ಅರ್ಜಿ ಕೊಡುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲೇ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವ ವಾತಾವರಣ ರಾಜ್ಯದಲ್ಲಿ ಸೃಷ್ಟಿ ಆಗುತ್ತಿದೆ. ಜಯದೇವ ಆಸ್ಪತ್ರೆಯಿಂದ ಉತ್ತಮಸೇವೆ ಸಾಧ್ಯ ಆಗಿರುವಾಗ ಉಳಿದ ಕಡೆಗಳಲ್ಲೂ ಅದೇ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಿದೆ. ರಾಜ್ಯ ಸರ್ಕಾರ ಆ ದಿಕ್ಕಿನಲ್ಲಿ ಶ್ರಮಿಸುತ್ತಿದೆ ಎಂದು ತಿಳಿಸಿದರು.




