ಮಂಗಳೂರು: ಪುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐವರು ಯುವತಿಯರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿಯೋರ್ವಳು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಮಂಗಳೂರಿನ ಲೇಡಿಹಿಲ್ ನಲ್ಲಿ ನಡೆದಿದೆ.
ಮೃತಪಟ್ಟ ಯುವತಿ ಸುರತ್ಕಲ್ ಕಾನ ನಿವಾಸಿ ರೂಪಶ್ರೀ (23) ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಸ್ವಾತಿ( 26) ಹಿತನ್ವಿ(16) ಕೃತಿಕಾ( 16) ಯತಿಕಾ (12) ಎಂದು ಗುರುತಿಸಲಾಗಿದೆ. ಸಂಜೆ ಸರಿಸುಮಾರು 4 ಗಂಟೆ ವೇಳೆಗೆ ಈ ಘಟನೆಯು ನಡೆದಿದ್ದು, ಐವರು ಯುವತಿಯರು ಮಣ್ಣಗುಡ್ಡ ಮಹಾನಗರ ಪಾಲಿಕೆಯ ಈಜುಕೊಳದ ಬಳಿ ಪುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಕಾರು ಚಾಲಕ ಕಮಲೇಶ್ ಬಲ್ ದೇವ್ ಎಂಬಾತ ಮಣ್ಣಗುಡ್ಡ ಜಂಕ್ಷನ್ ನಿಂದ ಲೇಡಿಹಿಲ್ ಕಡೆಗೆ ಹುಂಡೈ ಇಯೋನ್ ಕಾರನ್ನು ಅತಿವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯುವತಿಯರ ಗುಂಪಿಗೆ ಡಿಕ್ಕಿಯಾಗಿ ಸ್ಥಳದಿಂದ ಅದೇ ವೇಗದಲ್ಲಿ ಪರಾರಿಯಾಗಿದ್ದಾನೆ.
ನಂತರ ಕಾರನ್ನು ಹೋಂಡಾ ಶೋರೂಂ ಮುಂದೆ ನಿಲ್ಲಿಸಿ, ಮನೆಗೆ ತೆರಳಿ ತಂದೆಯೊಂದಿಗೆ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ಪಶ್ಚಿಮ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.