ಕಾಸರಗೋಡು: ಜಿಂಕೆಯನ್ನು ಬೇಟೆಯಾಡಿ ಮಾಂಸ ಹೊಂದಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕಾಸರಗೋಡು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಸೆ. 10ರಂದು ಪಾಣತ್ತಡಿ ಮೀಸಲು ಅರಣ್ಯದಲ್ಲಿ ಜಿಂಕೆಯನ್ನು ಬೇಟೆಯಾಡಿದ ಆರೋಪ ಇವರ ಮೇಲಿದೆ.
ಅರಣ್ಯದಲ್ಲಿ ಜಿಂಕೆ ಬೇಟೆಯಾಡುವ ಖಚಿತ ಮಾಹಿತಿ ಆಧರಿಸಿ ಪಾಣತ್ತಡಿ ವಿಭಾಗೀಯ ಅರಣ್ಯಾಧಿಕಾರಿ ನೇತೃತ್ವದ ತಂಡ ಗಸ್ತು ನಡೆಸುತ್ತಿತ್ತು. ಈ ವೇಳೆ ಅರಣ್ಯದಿಂದ ಮೂವರು ಹೊರಬರುತ್ತಿರುವುದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಅವರನ್ನು ಹಿಡಿಯಲು ಮುಂದಾದಾಗ ಇಬ್ಬರು ಪರಾರಿಯಾಗಿದ್ದರು. ಸೆರೆ ಸಿಕ್ಕಿದವನಿಂದ 40 ಕೆಜಿ ಜಿಂಕೆ ಮಾಂಸ ಹಾಗೂ ನಾಡತೋಪು ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ತನಿಖೆ ಸಂದರ್ಭ ಪರಾರಿಯಾಗಿದ್ದವರು ಕಾರಿಕ್ಕೆ ನಿವಾಸಿಗಳಾದ ಎಂ.ಎ. ಸುಬೀರ್ (46) ಮತ್ತು ನೌಫಲ್ ಎ.ಎಚ್. (37) ಎಂದು ಪತ್ತೆಯಾಯಿತು. ಜಿಂಕೆಯನ್ನು ಬೇಟೆಯಾಡಲು ನಾಡತೋಪು ಬಳಸಿದ್ದರೆಂದು ತಿಳಿದು ಬಂದಿದೆ. ಕಾಂಞಂಗಾಡ್ ಅರಣ್ಯ ವಲಯದಲ್ಲಿ ಮೂವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಸುಬೀರ್ ಮತ್ತು ನೌಫಲ್ ನಿರೀಕ್ಷಣಾ ಜಾಮೀನಿಗಾಗಿ ಕಾಸರಗೋಡು ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಕಾಂಞಂಗಾಡ್ ವಲಯ ಅರಣ್ಯಾಧಿಕಾರಿ ಕೆ. ರಾಹುಲ್ ಪರವಾಗಿ ಪ್ರಾಸಿಕ್ಯೂಷನ್ ಜಾಮೀನಿಗೆ ವಿರೋಧ ವ್ಯಕ್ತಪಡಿಸಿತು. ತನಿಖೆ ಪೂರ್ಣಗೊಳಿಸಲು ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಳ್ಳುವುದು, ಮತ್ತಷ್ಟು ವಸ್ತುಗಳನ್ನು ವಶಪಡಿಸಿಕೊಳ್ಳುವುದು ಹಾಗೂ ಪ್ರಕರಣದಲ್ಲಿ ಇತರರ ಪಾತ್ರವಿದೆಯೇ ಎಂಬುದನ್ನು ಪತ್ತೆಹಚ್ಚಲು ಅವರ ಕಸ್ಟಡಿ ಅಗತ್ಯವಿದೆ ಎಂದು ಪ್ರಾಸಿಕ್ಯೂಷನ್ ವಾದಿಸಿತು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಮುಂದಿನ ಕಾನೂನು ಕ್ರಮಕ್ಕಾಗಿ ಅರಣ್ಯ ಇಲಾಖೆಗೆ ಶರಣಾಗುವಂತೆ ಸೂಚಿಸಿತು.





