ಬೆಂಗಳೂರು: ನಾಡಿನ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರಕ್ಕೆ ಒಂದು ದಿನ ಬಾಕಿ ಇದ್ದು, ಸಮಾರಂಭ ಸರಳವಾಗಿದ್ದರೂ ಹಬ್ಬದಷ್ಟು ಸಡಗರದಿಂದ ಆಚರಿಸಲು ನಿರ್ಧರಿಸಿರುವ ಅಭಿಮಾನಿಗಳು, ಕಾರ್ಯಕರ್ತರು ಬೃಹತ್ ಕಟೌಟ್, ಬ್ಯಾನರ್ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.

ಜೂ.3ರ ಬುಧವಾರ ಸಂಜೆ 4.05ಕ್ಕೆ ಡಿ.ಕೆ.ಶಿವಕುಮಾರ್ ಅವರು ಲೋಕಭವನದ ಗಾಜಿನ ಮನೆಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ. ಆದರೆ, ಇದನ್ನು ಹಬ್ಬದಂತೆ ಆಚರಿಸಲು ಕಾರ್ಯಕರ್ತರು ಕಟಿಬದ್ಧರಾಗಿದ್ದು, ಲೋಕಭವನ, ವಿಧಾನಸೌಧ, ರೇಸ್ಕೋರ್ಸ್ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳ ಸುತ್ತಮುತ್ತ ಪಕ್ಷದ ನಾಯಕರ ಭಾವಚಿತ್ರಗಳನ್ನು ಒಳಗೊಂಡ ಕಟೌಟ್ ಕಟ್ಟಲು ತಯಾರಿ ಮಾಡಿಕೊಂಡಿದ್ದಾರೆ.
ಮೇ 15ರಂದು ತಮ್ಮ ಹುಟ್ಟುಹಬ್ಬಕ್ಕೆ ಯಾವುದೇ ಕಟೌಟ್ ಇತ್ಯಾದಿಗಳನ್ನು ಹಾಕದಂತೆ ಡಿ.ಕೆ.ಶಿವಕುಮಾರ್ ತಾಕೀತು ಮಾಡಿದ್ದರು. ಇದೀಗ ಅವರ ಹುಟ್ಟುಹಬ್ಬದ ಉಡುಗೊರೆ ಎಂಬಂತೆ ಅವರಿಗೆ ಸಿಎಂ ಪಟ್ಟ ಒಲಿದಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನೇ ಹುಟ್ಟುಹಬ್ಬದ ಸಂಭ್ರಮ, ಸಡಗರಕ್ಕಿಂತ ಹೆಚ್ಚಿನದಾಗಿ ಆಚರಿಸಲು ಮುಂದಾಗಿದ್ದಾರೆ.
ಈಗಾಗಲೇ ರೇಸ್ಕೋರ್ಸ್ ರಸ್ತೆಯಲ್ಲಿ ಶಿವಕುಮಾರ್ ಅವರ ದೊಡ್ಡ ಬ್ಯಾನರ್ಗಳನ್ನು ಅಳವಡಿಸಿದ್ದು, ವಿಧಾನಸೌಧ ಹಾಗೂ ಹೈಕೋರ್ಟ್ ಮುಂಭಾಗದ ರಸ್ತೆಬದಿಗಳಲ್ಲಿ ಬೃಹದಾಕಾರದ ಕಟೌಟ್ಗಳನ್ನು ನಿಲ್ಲಿಸಲಾಗುತ್ತಿದೆ. ಅದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸತ್ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮಾತ್ರವಲ್ಲದೆ, ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರಗಳನ್ನೂ ಒಳಗೊಂಡ ಕಟೌಟ್ಗಳು ತಲೆ ಎತ್ತುತ್ತಿವೆ. ಪಕ್ಷದ ಶಿಷ್ಟಾಚಾರದಂತೆ ಯಾವುದೇ ನಾಯಕರನ್ನೂ ಕಡೆಗಣಿಸದಂತೆ ಎಚ್ಚರಿಕೆಯಿಂದ ಕಟೌಟ್ಗಳನ್ನು ಸಿದ್ಧಪಡಿಸಲಾಗಿದೆ.




