ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಧರ್ಮಸ್ಥಳದ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ ದೂರಿನ ಹಿನ್ನೆಲೆ ಪೊಲೀಸರು ಐಪಿಸಿ 1860(U/S-143, 353, 504, 149) ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ ಬಿಜೆಪಿ ಶಾಸಕರಾದ ಹರೀಶ್ ಪೂಂಜಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಬಗ್ಗೆ ಫೇಸ್ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯೆಯನ್ನು ನೀಡಿದ್ದು, ನೋಡೇ ಬಿಡೋಣ, ನಾನು ಶಾಸಕನಾಗಿರುವುದು ನನ್ನ ಜನರ ಸೇವೆಗೆ ಮತ್ತು ಅವರ ರಕ್ಷಣೆಗೆ ಜೈಲಿಗೆ ಹೋಗಲು ಸಿದ್ಧ. ಬಾಲ್ಯದಿಂದಲೂ ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ವೀರ ಸಾವರ್ಕರ್, ಭಗತ್ ಸಿಂಗ್ ಮುಂತಾದವರನ್ನು ಆದರ್ಶವಾಗಿ ಇಟ್ಟುಕೊಂಡಿದ್ದೇನೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ABVP) ದಿನಗಳಿಂದ ಜನ ಸೇವೆ, ಜನರಿಗಾಗಿ ಸಂಘರ್ಷ ಮಾಡಿಕೊಂಡು ನಾಯಕನಾದವನು. ನಾನು ಜನರಿಂದ ಶಾಸಕನಾಗಿ ಜನರಿಗೋಸ್ಕರ ಇರುವವನು ಅದಕ್ಕಾಗಿ ಯಾವ ಬೆಲೆ ತೆರಲು ಸಿದ್ಧ ಎಂದು ಬರೆದುಕೊಂಡಿದ್ದಾರೆ.
ನನ್ನ ವಿಧಾನಸಭಾ ಕ್ಷೇತ್ರದಲ್ಲಿ, ಅರಣ್ಯದ ಅಂಚಿನಲ್ಲಿ, ನೂರು ವರ್ಷಕ್ಕಿಂತಲೂ ಹಿಂದಿನಿಂದ ಕೃಷಿ ಚಟುವಟಿಕೆ ಮಾಡುತ್ತಾ ಬಂದಿದ್ದ ಕಳೆಂಜದ ಶ್ರೀ ದೇವಣ್ಣ ಗೌಡ ಅವರ ಕುಟುಂಬವನ್ನು ಒಕ್ಕಲೆಬ್ಬಿಸಲು ಯತ್ನಿಸಿದ ಅರಣ್ಯ ಇಲಾಖೆಯ ವಿರುದ್ಧ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಶಾಸಕ ಮಿತ್ರರೊಂದಿಗೆ ಮತ್ತು ಕಾರ್ಯಕರ್ತರೊಂದಿಗೆ ಸೇರಿ ಪ್ರತಿಭಟಿಸಿ ಬಡ ಕುಟುಂಬವನ್ನು ಒಕ್ಕಲೆಬ್ಬಿಸುವುದರಿಂದ ತಡೆದಿದ್ದೇವು ಎಂದು ಶಾಸಕ ಹರೀಶ್ ಪೂಂಜಾ ಬರೆದಿದ್ದಾರೆ.
ಹೀಗಾದರೆ ಸಾಮಾನ್ಯ ಜನರ ಗತಿಯೇನು? ಜನರ ಸಮಸ್ಯೆಗೆ ಧ್ವನಿಯಾದ ಒಬ್ಬ ಜನಪ್ರತಿನಿಧಿಯನ್ನು ಹೀಗೆಲ್ಲ ಕಾಡುವುದಾದರೆ ಜನಸಾಮಾನ್ಯರು ಕಾಂಗ್ರೆಸ್ ಸರ್ಕಾರದಡಿಯಲ್ಲಿ ಹೇಗೆ ಬದುಕಬೇಕು? ಮಾನ್ಯ ಮುಖ್ಯಮಂತ್ರಿಗಳೇ, ಅರಣ್ಯ ಸಚಿವರೇ ನಿಮ್ಮ ಈ ಬೆದರಿಕೆ ತಂತ್ರಗಳಿಗೆ ನಾನು ಬೆದರುವುದಿಲ್ಲ. ಮತ್ತೆ ಹೇಳುತ್ತಿದ್ದೇನೆ ಬಡವರಿಗಾಗಿ ಇಂತಹ ನೂರು ಕೇಸು ಹಾಕಿಸಿಕೊಳ್ಳುವುದಕ್ಕೂ ಸಿದ್ಧನಿದ್ದೇನೆ, ಜೈಲು ಸೇರಲೂ ತಯಾರಿದ್ದೇನೆ ಎಂದು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಮನೆಯವರ ಪರವಾಗಿ ನಾನೊಬ್ಬ ಜನಪ್ರತಿನಿಧಿಯಾಗಿ ಧ್ವನಿ ಎತ್ತಿದ್ದು ತಪ್ಪಾಯಿತೇ? ನನ್ನ ಕ್ಷೇತ್ರದ ಜನರ ಪರವಾಗಿ ಹೋರಾಡುವ ಹಕ್ಕು ನನಗಿಲ್ಲವೇ? ನನ್ನ ಜನ ನನ್ನಲ್ಲಿ ಸಮಸ್ಯೆ ಹೇಳಿಕೊಂಡಾಗ ಸುಮ್ಮನಿರಬೇಕೇ ಎಂದು ಶಾಸಕರು ಪ್ರಶ್ನೆ ಮಾಡಿದ್ದಾರೆ.