ಮಂಗಳೂರು: ರೈಲು ಬೋಗಿಯಲ್ಲಿ ಇಯರ್‌ಫೋನ್‌ಗಳಿಲ್ಲದೆ ‘ರೀಲ್ಸ್’ (reels) ವೀಕ್ಷಿಸುವುದು ಅಥವಾ ಫೋನ್ನಲ್ಲಿ ಜೋರಾಗಿ ದೀರ್ಘಕಾಲ ಮಾತನಾಡುವುದು ಇನ್ನು ಮುಂದೆ ದುಬಾರಿಯಾಗಬಹುದು. ಇಯರ್‌ಫೋನ್‌ಗಳನ್ನು ಬಳಸದೆ ಆಡಿಯೋ ಪ್ಲೇ ಮಾಡುವುದು ಅಥವಾ ಫೋನ್ನಲ್ಲಿ ಜೋರಾಗಿ ಮಾತನಾಡುವುದು ಅಥವಾ ಸ್ಪೀಕರ್ ಮೋಡ್ ನಲ್ಲಿ ಮಾತನಾಡುವುದು ದಂಡಕ್ಕೆ ಮತ್ತು ಕೆಲವು ಸಂದರ್ಭಗಳಲ್ಲಿ ಜೈಲು ಶಿಕ್ಷೆಗೂ ಕಾರಣವಾಗಬಹುದು ಎಂದು ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲು ಪ್ರಾರಂಭಿಸಿದೆ.
ಮೊಬೈಲ್ ಫೋನ್‌ಗಳನ್ನು ಸ್ಪೀಕರ್ ಮೋಡ್‌ನಲ್ಲಿ ಬಳಸಿ ಮತ್ತು ಜೋರಾಗಿ ಮಾತನಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ವ್ಯಕ್ತಿಯನ್ನು ರೈಲ್ವೇ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ರೈಲ್ವೇ ಆವರಣದಿಂದ ಹೊರಹಾಕಲು ಮತ್ತು 1,000 ರೂ.ಗಳ ದಂಡ ವಿಧಿಸಲು ಅವಕಾಶವಿದೆ.
ಎಚ್ಚರಿಕೆ ನೀಡಿದರೂ ವ್ಯಕ್ತಿಯು ತೊಂದರೆ ನೀಡುವುದನ್ನು ಮುಂದುವರಿಸಿದರೆ ಆರು ತಿಂಗಳ ಸಾಮಾನ್ಯ ಜೈಲು ಶಿಕ್ಷೆ ಮತ್ತು ಅಥವಾ 5,000 ರೂ. ದಂಡ ವಿಧಿಸಲಾಗುವುದು ಎಂದು ರೈಲ್ವೇ ತಿಳಿಸಿದೆ.
ಈ ಕ್ರಮವು 1989ರ ರೈಲ್ವೆ ಕಾಯಿದೆಯ ಸೆಕ್ಷನ್ 145(2) ಆಧರಿಸಿದೆ; ಇದು ಇತರರಿಗೆ ಉಪದ್ರವ ಅಥವಾ ತೊಂದರೆ ಉಂಟುಮಾಡುವ ಪ್ರಯಾಣಿಕರಿಗೆ ಅನ್ವಯಿಸುತ್ತದೆ. ಈ ಸೆಕ್ಷನ್ ಅಡಿಯಲ್ಲಿ ಇಂತಹ ನಡವಳಿಕೆಯ ವಿರುದ್ದ ಕ್ರಮ ಕೈಗೊಳ್ಳಲು ಮೊದಲೇ ಅವಕಾಶವಿತ್ತಾದರೂ, ಅದಕ್ಕೆ ವಿಧಿಸಬೇಕಾದ ದಂಡದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿರಲಿಲ್ಲ. ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಕಾಯಿದೆ 2026ಯಲ್ಲಿ ಇದೀಗ ದಂಡಕ್ಕೆ ಅವಕಾಶ ನೀಡಲಾಗಿದೆ.
ಇಯರ್‌ಫೋನ್‌ಗಳನ್ನು ಬಳಸಲು ಅನುಮತಿಯಿದೆ. ಇತರರಿಗೆ ತೊಂದರೆಯಾಗದ ಹೊರತು, ವೀಡಿಯೊಗಳನ್ನು ನೋಡುವುದು, ಸಂಗೀತ ಕೇಳುವುದು ಮತ್ತು ಕರೆಗಳನ್ನು ಮಾಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ.




