ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ರೂಪಿಸುವ ಗುರಿ: ಶಾಸಕ ಸಿಮೆಂಟ್ ಮಂಜು.

Share with


ಸಕಲೇಶಪುರ: ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸುವ ಗುರಿ ಹೊಂದಿದ್ದು, ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕೆರೆ ಶಾಲಾ ಆವರಣದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೈಗೆತ್ತಿಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಉತ್ತಮ ರಸ್ತೆ ಸಂಪರ್ಕ, ಅಗತ್ಯ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುವುದು ಅಭಿವೃದ್ಧಿಯ ಮುಖ್ಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ, ಶಾಲಾ ಕಟ್ಟಡ ನಿರ್ಮಾಣ, ಬಸ್ ನಿಲ್ದಾಣ ಸೇರಿದಂತೆ ಜನರಿಗೆ ಅನುಕೂಲವಾಗುವ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ಹಂತ ಹಂತವಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅರೆಕೆರೆ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅರೆಕೆರೆ–ಚಿಕ್ಕಸತ್ತಿಗಾಲ್ ರಸ್ತೆ ನಿರ್ಮಾಣಕ್ಕೆ ₹55 ಲಕ್ಷ, ಅರೆಕೆರೆ–ಬ್ಯಾಗದೀಣ್ಣೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ₹25 ಲಕ್ಷ ಹಾಗೂ ಅರೆಕೆರೆ ಕೊಪ್ಪಲು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ₹20 ಲಕ್ಷ ವೆಚ್ಚ ಮಾಡಲಾಗಿದೆ.
ಇದರೊಂದಿಗೆ ₹22 ಲಕ್ಷ ವೆಚ್ಚದಲ್ಲಿ ನೂತನ ಶಾಲಾ ಕಟ್ಟಡ ಹಾಗೂ ಕಾಂಪೌಂಡ್ ನಿರ್ಮಾಣ, ₹50 ಸಾವಿರ ವೆಚ್ಚದಲ್ಲಿ ಸ್ವಾಗತ ಕಮಾನು ನಿರ್ಮಾಣ, ₹2.50 ಲಕ್ಷ ವೆಚ್ಚದಲ್ಲಿ ಅರೆಕೆರೆ ಶಾಲೆಯ ಬಸ್ ನಿಲ್ದಾಣ ನಿರ್ಮಾಣ ಮತ್ತು ₹2.50 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕೇಂದ್ರದ ದುರಸ್ತಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅರೆಕೆರೆ ನರೇಶ್, ಬನ್ನಹಳ್ಳಿ ಪುನೀತ್, ಇಂದನ್, ಅಗ್ನಿ ಸೋಮಶೇಖರ್, ಪ್ರಸನ್ನ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Share with

Tags:

Leave a Reply

Your email address will not be published. Required fields are marked *