ಪಿಎಂ ಕಿಸಾನ್ ಹಣ ಸಿಕ್ಕಿಲ್ಲವಾ? ಈ ಕಾರಣಗಳಿದ್ದೀತು ಗಮನಿಸಿ

Share with

ನವದೆಹಲಿ, ನವೆಂಬರ್ 21: ಪಿಎಂ ಕಿಸಾನ್ ಸ್ಕೀಮ್ನ (PM Kisan Scheme) 21ನೇ ಕಂತಿನ ಹಣ ಮೊನ್ನೆ (ನ. 19) ಬಿಡುಗಡೆ ಆಗಿದೆ. 9 ಕೋಟಿ ರೈತರಿಗೆ (farmers) ತಲಾ 2,000 ರೂನಂತೆ ಒಟ್ಟು 18,000 ಕೋಟಿ ರೂ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದಿನ ಕಂತುಗಳಲ್ಲಿ ಸುಮಾರು 10 ಕೋಟಿ ರೈತರಿಗೆ ಹಣ ನೀಡಲಾಗಿತ್ತು. 21ನೇ ಕಂತಿನಲ್ಲಿ ಹಣ ಪಡೆದವರ ಸಂಖ್ಯೆ ಕಡಿಮೆ ಆಗಿದೆ. ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ ಹಲವರಿಗೆ ಹಣ ಸಿಕ್ಕಿಲ್ಲ. ಬೇರೆ ಬೇರೆ ಕಾರಣದಿಂದ ಹಲವರು ಯೋಜನೆಯಿಂದ ವಂಚಿತರಾಗಿದ್ದಾರೆ.

ಪಿಎಂ ಕಿಸಾನ್ ಯೋಜನೆಗೆ ಯಾರು ಅನರ್ಹರು?
ಪಿಎಂ ಕಿಸಾನ್ ಯೋಜನೆಯು ಕೃಷಿ ಭೂಮಿ ಹೊಂದಿರುವ ಎಲ್ಲಾ ರೈತರಿಗೂ ಲಭ್ಯ ಇರುತ್ತದೆ. ಆದರೆ, ವೃತ್ತಿಪರ ಕೆಲಸ ಮಾಡುವವರು, ಹಾಲಿ ಮತ್ತು ಮಾಜಿ ಸಚಿವರು, ಶಾಸಕರು, ಜಿಪಂ ಅಧ್ಯಕ್ಷರು, ಸಂಸದರು ಇತ್ಯಾದಿ ಜನಪ್ರತಿನಿಧಿಗಳು, ಸರ್ಕಾರಿ ನೌಕರರು, ಪಿಂಚಣಿದಾರರು, ಐಟಿ ಪಾವತಿದಾರರು ಮೊದಲಾದವರು ಕೃಷಿ ಜಮೀನು ಹೊಂದಿದರೂ ಯೋಜನೆಯ ಫಲಾನುಭವಿಯಾಗಲು ಅರ್ಹರಿರುವುದಿಲ್ಲ.

ಈ ಕೆಳಗಿನ ರೈತರಿಗೂ ಸಿಗೋದಿಲ್ಲ ಕಿಸಾನ್ ಹಣ

  • 2019ರ ಫೆಬ್ರುವರಿ 1ರಂದು ಜಮೀನು ಮಾಲಕತ್ವ ಪಡೆದ ರೈತರು ಯೋಜನೆಯ ಫಲಾನುಭವಿಯಾಗುವುದಿಲ್ಲ
  • ಅಪ್ಪ ಅಥವಾ ಅಮ್ಮ ಬದುಕಿರುವಾಗಲೇ ಅವರಿಂದ ಜಮೀನು ವರ್ಗಾವಣೆ ಆಗಿದ್ದರೆ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ಲ
  • ಒಂದು ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸುವಂತಿಲ್ಲ

ಬಹಳಷ್ಟು ಜನರಿಗೆ ಈ ಮೇಲಿನ ಮೂರು ಅಂಶಗಳು ತಿಳಿಯದೇ ಗೊಂದಲ ಆಗುತ್ತಿದೆ. ಹಾಗೆಯೇ, ಯೋಜನೆಗೆ ನೊಂದಾಯಿಸಿದ ಬಳಿಕ ಒಮ್ಮೆಯೂ ಇಕೆವೈಸಿ ಮಾಡಿಸದೇ ಇದ್ದರೂ ಪಿಎಂ ಕಿಸಾನ್ ಹಣ ಸಿಗೋದಿಲ್ಲ. ಈಗ ಇಕೆವೈಸಿ ಕಡ್ಡಾಯವಾಗಿದೆ. ಭೌತಿಕವಾಗಿಯೂ ಎಲ್ಲಾ ಫಲಾನುಭವಿಗಳ ದಾಖಲೆ ಪರೀಕ್ಷೆ ಮಾಡಲಾಗುತ್ತಿದೆ. ಯೋಜನೆಗೆ ನೀಡಿರುವ ಬ್ಯಾಂಕ್ ಖಾತೆಯ ಮಾಹಿತಿ ತಪ್ಪಾಗಿದ್ದರೆ ಅಥವಾ ಖಾತೆಗೆ ಆಧಾರ್ ಜೋಡಿತವಾಗದೇ ಇದ್ದಾಗಲೂ ಹಣ ಬರೋದಿಲ್ಲ.


Share with

Leave a Reply

Your email address will not be published. Required fields are marked *