ಶಿರಸಿ: ಬಾವಿ ನೀರಿಗೆ ಬೆಂಕಿ ಹಚ್ಚಿದರೆ ಧಗಧಗ; ಆರು ಬಾವಿಗಳಲ್ಲಿ ಆಯಿಲ್ ಮಿಶ್ರಣ!

Share with

ಉತ್ತರ ಕನ್ನಡ: ಜಿಲ್ಲೆಯ ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮದ ಓಂಕಾರ ನಗರದಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬಾವಿಗಳ ನೀರಿಗೆ ಬೆಂಕಿ ಕಡ್ಡಿ ಗೀರಿದರೆ ನೀರು ಹೊತ್ತಿ ಉರಿಯುತ್ತಿದ್ದು, ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.

ಆರು ಬಾವಿಗಳ ನೀರು ಕಲುಷಿತ

ಓಂಕಾರ ನಗರದ ಸುಮಾರು ಆರು ಬಾವಿಗಳ ನೀರಿನಲ್ಲಿ ಆಯಿಲ್ ಮಿಶ್ರಣವಾಗಿರುವುದು ಪತ್ತೆಯಾಗಿದೆ. ಬಾವಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಪೆಟ್ರೋಲ್ ಅಥವಾ ಡೀಸೆಲ್‌ನಂತಹ ವಾಸನೆ ಬರುತ್ತಿದೆ. ನೀರಿನ ಮೇಲ್ಭಾಗದಲ್ಲಿ ಎಣ್ಣೆಯ ಪದರ ತೇಲುತ್ತಿದ್ದು, ಬಾವಿಯಿಂದ ನೀರನ್ನು ಖಾಲಿ ಮಾಡಿದರೂ ಮತ್ತೆ ಆಯಿಲ್ ಮಿಶ್ರಿತ ನೀರು ತುಂಬಿಕೊಳ್ಳುತ್ತಿದೆ ಎನ್ನಲಾಗಿದೆ. ನೀರಿನಲ್ಲಿ ಪೇಪರ್ ಅದ್ದಿ ಬೆಂಕಿ ಹಚ್ಚಿದಾಗ ಅದು ಹೊತ್ತಿ ಉರಿಯುತ್ತಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಪವರ್ ಗ್ರಿಡ್‌ನಿಂದ ಆಯಿಲ್ ಸೋರಿಕೆ ಶಂಕೆ

ಓಂಕಾರ ನಗರದ ಸಮೀಪದಲ್ಲೇ ಬೃಹತ್ ವಿದ್ಯುತ್ ಪ್ರಸರಣ ಪವರ್ ಗ್ರಿಡ್ ಇದೆ. ಇಲ್ಲಿನ ಟ್ರಾನ್ಸ್‌ಫಾರ್ಮರ್‌ಗಳಿಂದ ಆಯಿಲ್ ಸೋರಿಕೆಯಾಗಿ ಭೂಮಿಯೊಳಗೆ ಸೇರಿ ಅಂತರ್ಜಲ ಕಲುಷಿತಗೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ತಜ್ಞರ ತಂಡ ಪವರ್ ಗ್ರಿಡ್ ಆವರಣಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಕುಡಿಯಲು ಯೋಗ್ಯವಲ್ಲದ ನೀರು

ಘಟನೆ ತಿಳಿದ ತಕ್ಷಣ ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಾವಿಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಪ್ರಾಥಮಿಕ ಪರೀಕ್ಷೆಯಲ್ಲಿ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ತಿಳಿದುಬಂದಿದೆ. ಹೀಗಾಗಿ ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಪಂಚಾಯತ್ ಕ್ರಮ ಕೈಗೊಂಡಿದೆ.

ಬಾವಿಗಳ ನೀರಿಗೆ ಆಯಿಲ್ ಮಿಶ್ರಣವಾಗುತ್ತಿರುವ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಪ್ರಯೋಗಾಲಯದ ಸಂಪೂರ್ಣ ವರದಿ ಬಂದ ಬಳಿಕವಷ್ಟೇ ಕಲುಷಿತ ನೀರಿನ ಮೂಲದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.


Share with

Leave a Reply

Your email address will not be published. Required fields are marked *