ಮಂಗಳೂರು: ರಾಜ್ಯದಲ್ಲಿ ನಾಲ್ಕು ಕಡೆ ಸರಕಾರದಿಂದಲೇ ಐವಿಎಫ್ ಘಟಕಗಳ ಸ್ಥಾಪನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಮಂಗಳೂರಿನಲ್ಲಿ ಶನಿವಾರ (ನ.07) ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಒಂದು ಕೇಂದ್ರವನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗುವುದು. ಬೆಂಗಳೂರು ಮತ್ತು ಮೈಸೂರಿನಲ್ಲಿಯೂ ಘಟಕ ನಿರ್ಮಾಣ ಮಾಡಲಾಗುವುದು, ಉತ್ತರ ಕರ್ನಾಟಕಕ್ಕೆ ಸಂಬಂಧಿಸಿ ಹುಬ್ಬಳ್ಳಿ, ಬೆಳಗಾವಿ ಅಥವಾ ಕಲಬುರಗಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಮಂಗಳೂರಿನ ಲೇಡಿಗೋಷನ್ ನಲ್ಲಿ ಘಟಕೆ ಸ್ಥಾಪನೆಗೆ ಸಂಬಂಧಿಸಿ 5 ಕೋ.ರೂ. ಮೊತ್ತದ ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಈ ಸೇವೆ ಲಭ್ಯವಿದೆ. ಬಡವರು 2-3 ಲಕ್ಷ ರೂ. ವೆಚ್ಚವನ್ನು ಭರಿಸುವುದು ಕಷ್ಟವಾಗುತ್ತಿದೆ. ಆ ನಿಟ್ಟಿನಲ್ಲಿ ಸರಕಾರದಿಂದಲೇ ಉಚಿತವಾಗಿ ಈ ಚಿಕಿತ್ಸೆ ನೀಡಲು ಘಟಕಗಳ ಸ್ಥಾಪನೆ ಮಾಡಲಾಗುತ್ತಿದೆ ಎಂದರು.
ಉಡುಪಿ ಜಿಲ್ಲೆಯ ಬೈಂದೂರು ಮತ್ತು ದ.ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ತಾಲೂಕು ಆಸ್ಪತ್ರೆ ರಚನೆ ಮಾಡಲಾಗುತ್ತದೆ. ಪ್ರಸ್ತುತ ಇರುವ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ತಾಲೂಕು ಆಸ್ಪತ್ರೆ ರಚನೆ ಮಾಡಲಾಗುವುದು. ಇದಕ್ಕಾಗಿ ತಲಾ 25 ಕೋ.ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.




