ಉಡುಪಿ: ನಿಂತಿದ್ದ ಲಾರಿಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾಪು ತಾಲೂಕಿನ ಪಾಂಗಾಳದಲ್ಲಿ ಫೆ.28ರಂದು ರಾತ್ರಿ ಸಂಭವಿಸಿದೆ.
![ನಿಂತಿದ್ದ ಲಾರಿಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಕಾರು](https://i0.wp.com/veekshakavani.com/wp-content/uploads/2024/02/ಲಾರಿಗೆ-ಕಾರು-ಡಿಕ್ಕಿ.jpg?resize=640%2C400&ssl=1)
ಮೃತರನ್ನು ಭಾರತ್ ನಗರ ನಿವಾಸಿ ನಾಗೇಶ್ ಕಾಮತ್(70) ಎಂದು ಗುರುತಿಸಲಾಗಿದೆ. ಕಾಪುವಿನ ಮೆಸ್ಕಾಂಗೆ ಗುತ್ತಿಗೆ ಆಧಾರಿತ ಕಾರನ್ನು ಚಲಾಯಿಸುತ್ತಿದ್ದ ಅವರು, ಎಇಇ ಅವರನ್ನು ಮನೆಗೆ ಬಿಟ್ಟು ಕಾಪು ಕಡೆಗೆ ಆಗಮಿಸುತ್ತಿದ್ದಾಗ ಪಾಂಗಾಳದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಪಘಾತದಿಂದಾಗಿ ಕೆಲವು ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
![ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.](https://i0.wp.com/veekshakavani.com/wp-content/uploads/2024/02/ಕಾರು-ಡಿಕ್ಕಿ.jpg?resize=640%2C400&ssl=1)
ಕಾರಿನೊಳಗೆ ಸಿಲುಕಿದ್ದ ಚಾಲಕನನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟರು. ಕಬ್ಬಿಣದ ರಾಡ್ ಬಳಸಿ ಚಾಲಕನನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.