ದ.ಕ: ಕರಾವಳಿ ಜಿಲ್ಲೆಗಳು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಗಣೇಶ ಚತುರ್ಥಿ ಸೆ.19ರಂದು ಆಚರಣೆಯಾಗುತ್ತಿದ್ದು, ಅದೇ ದಿನ ಸರಕಾರಿ ರಜೆ ಘೋಷಣೆ ಮಾಡಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.
ಈ ಹಿನ್ನಲೆಯಲ್ಲಿ ದ.ಕ. ಜಿಲ್ಲೆಯಾದ್ಯಂತ ಸರಕಾರಿ ರಜೆಯನ್ನು ಸೆ.18ರ ಬದಲು 19ರಂದು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಸೆ. 19ರಂದು ಆಚರಿಸಲಾಗುವ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆಯನ್ನು ಸೆ. 19ರಂದೇ ನೀಡುವಂತೆ ಸ್ಪೀಕರ್ ಖಾದರ್ ಅವರಲ್ಲಿ ಮನವಿ ಮಾಡಿದ್ದು ಕೂಡಲೇ ಸ್ಪಂದಿಸಿದ ಅವರು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮಾತುಕತೆ ನಡೆಸಿ ಸೆ. 19ರಂದೇ ರಜೆ ನೀಡುವ ಆಶಾಭಾವ ವ್ಯಕ್ತಪಡಿಸಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ತಿಳಿಸಿದ್ದಾರೆ.