
ಶಿವಮೊಗ್ಗ :ನಗರದ ದಸರಾ ಮೆರವಣಿಗೆಯ ವೇಳೆ ಭಾರೀ ಅನಾಹುತ ಸಂಭವಿಸಿದೆ. ಬೆಳ್ಳಿಯ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅಸಂಖ್ಯಾತ ಜನರು ಜಮಾಯಿಸಿದ್ದರು.ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ದಾಟುತ್ತಿದ್ದಂತೆ ಸೋಮಣ್ಣ ಆನೆ ಬೆದರಿದ್ದು, ಆನೆಯನ್ನು ನಿಯಂತ್ರಿಸಲು ಮಾವುತರು ಹಾಗೂ ಕಾವಾಡಿಗರು ಹರಸಾಹಸ ಪಟ್ಟಿದ್ದಾರೆ. ಜನರನ್ನು ಕಂಡು ಹೆದರಿ ವಾಸವಿ ಶಾಲೆಯತ್ತ ದೌಡಾಯಿಸಿದ ಆನೆ ಆರ್ಭಟಕ್ಕೆ ಕಾರು, ಜೀಪು ಸೇರಿದಂತೆ ಹಲವು ವಾಹನಗಳಿಗೆ ಹಾನಿಯಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಅಂಬಾರಿ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಜನರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.




