ನವದೆಹಲಿ: ಮದುವೆಯ ಆಮಿಷವೊಡ್ಡಿ ₹24 ಲಕ್ಷ ವಂಚನೆ ಆರೋಪ; ಆರೋಪಿ ಬಂಧನ
ನವದೆಹಲಿ: ತಾನು ಶ್ರೀಮಂತ ಉದ್ಯಮಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿಕೊಂಡು ಸುಮಾರು 20 ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ವಂಚಿಸಿದ ಆರೋಪದ ಮೇಲೆ 23 ವರ್ಷದ ವಿಕ್ರಾಂತ್ ತೋಮರ್ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಇನ್ಸ್ಟಾಗ್ರಾಂನಲ್ಲಿ ದುಬಾರಿ ಕಾರುಗಳು, ಐಷಾರಾಮಿ ರೆಸ್ಟೋರೆಂಟ್ಗಳು ಹಾಗೂ ಶ್ರೀಮಂತ ಜೀವನಶೈಲಿಯ ಚಿತ್ರಗಳು ಮತ್ತು ವಿಡಿಯೋಗಳನ್ನು ಪ್ರಕಟಿಸಿ ಮಹಿಳೆಯರ ವಿಶ್ವಾಸ ಗಳಿಸುತ್ತಿದ್ದ ಎನ್ನಲಾಗಿದೆ. ಬಳಿಕ ಮದುವೆಯಾಗುವುದಾಗಿ ಭರವಸೆ ನೀಡಿ ವಿವಿಧ ಕಾರಣಗಳನ್ನು ಮುಂದಿಟ್ಟು ಹಣ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯರನ್ನು ಆಕರ್ಷಿಸಲು ದುಬಾರಿ ಕಾರುಗಳನ್ನು ಬಾಡಿಗೆಗೆ ಪಡೆದು ಸುತ್ತಾಡಿಸುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ. ಈ ಕಾರುಗಳನ್ನು ಬಳಸಿಕೊಂಡು ತಾನು ಶ್ರೀಮಂತ ಉದ್ಯಮಿ ಎಂಬ ಭಾವನೆ ಮೂಡಿಸುತ್ತಿದ್ದ ಎನ್ನಲಾಗಿದೆ.

ಕರೋಲ್ ಬಾಗ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಕಾನ್ಸ್ಟೇಬಲ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಆಕೆಗೆ ಸುಮಾರು ₹24 ಲಕ್ಷ ವಂಚಿಸಿರುವ ಆರೋಪವಿದೆ. ತನಿಖೆಯ ವೇಳೆ ಇದೇ ಬ್ಯಾಚ್ನ ಇತರ ಮಹಿಳಾ ಪೊಲೀಸ್ ಸಿಬ್ಬಂದಿಯೂ ವಂಚನೆಗೆ ಒಳಗಾಗಿರುವ ಸಾಧ್ಯತೆ ಬೆಳಕಿಗೆ ಬಂದಿದೆ.
ಆರೋಪಿಯ ವಿರುದ್ಧ ದೆಹಲಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಐದು ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ಪ್ರಕರಣದ ಹಣಕಾಸಿನ ವಹಿವಾಟು ಹಾಗೂ ಇತರ ಸಂತ್ರಸ್ತರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




