ವಯನಾಡ್ ಜಿಲ್ಲೆಯಲ್ಲಿ ಭೀಕರ ಭೂಕುಸಿತ, ಮಣ್ಣಿನ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ

Share with

ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆ; ಈಗಾಗಲೇ ಐವರು ಆಸ್ಪತ್ರೆಗೆ ದಾಖಲು

ಕಟ್ಟಾ (ಕೇರಳ): ಕೇರಳದ ವಯನಾಡ್ ಜಿಲ್ಲೆಯಲ್ಲಿ ಸೋಮವಾರ (ಜು.06) ರಾತ್ರಿಯಿಂದ ಸುರಿಯುತ್ತಿರುವ ಎಡೆಬಿಡದ ಭಾರೀ ಮಳೆಗೆ ಮಂಗಳವಾರ (ಜು.07) ಭೀಕರ ಭೂಕುಸಿತ ಸಂಭವಿಸಿದೆ. ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯ ಕಲ್ಲಾಡಿ ಬಳಿಯ ಮೀನಾಕ್ಷಿ ಸೇತುವೆ ಹತ್ತಿರ ಈ ಘಟನೆ ನಡೆದಿದ್ದು, ಪ್ರವಾಸಿ ಹೋಂಸ್ಟೇಗಳು ಹಾಗೂ ಆನಕ್ಕಂಪೋಯಿಲ್-ಮೇಪ್ಪಾಡಿ ಸುರಂಗ ಮಾರ್ಗ ನಿರ್ಮಾಣದ ಕಾರ್ಮಿಕರು ತಂಗಿದ್ದ ಜಾಗದ ಮೇಲೆ ಮಣ್ಣು ಕುಸಿದು ಬಿದ್ದಿದೆ.

ಘಟನಾ ಸ್ಥಳದಲ್ಲಿ ಸುರಂಗ ರಸ್ತೆ ಕಾಮಗಾರಿ ನಡೆಯುತ್ತಿದ್ದುದರಿಂದ ಹಲವಾರು ಕಾರ್ಮಿಕರು ಸ್ಥಳದಲ್ಲಿದ್ದರು ಎನ್ನಲಾಗಿದ್ದು, ಮಣ್ಣಿನ ಅಡಿಯಲ್ಲಿ ಹಲವರು ಸಿಲುಕಿರುವ ಭೀತಿ ಎದುರಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳೇ ತಕ್ಷಣವೇ ಕಾರ್ಯಪ್ರವೃತ್ತರಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಇಬ್ಬರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಸದ್ಯ ಗಾಯಗೊಂಡಿರುವ ಐವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇದುವರೆಗೆ ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ. ಆದರೆ ಕಾರ್ಮಿಕರನ್ನು ಕರೆದೊಯ್ಯಲು ನಿಲ್ಲಿಸಿದ್ದ ಹಲವು ವಾಹನಗಳು ಸಂಪೂರ್ಣ ಜಖಂಗೊಂಡಿವೆ.

ಕಳೆದ 24 ಗಂಟೆಗಳಲ್ಲಿ ಈ ಭಾಗದಲ್ಲಿ ಬರೋಬ್ಬರಿ 265 ಮಿಲಿಮೀಟರ್‌ನಷ್ಟು ದಾಖಲೆ ಪ್ರಮಾಣದ ಮಳೆಯಾಗಿದ್ದು, ಇದೇ ಭೂಕುಸಿತಕ್ಕೆ ಮುಖ್ಯ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಕಟ್ಟಾದಿಂದ ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿ ದಾವಿಸಿದ್ದು, ಮೀನಾಂಗಡಿಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಶೀಘ್ರದಲ್ಲೇ ಸ್ಥಳಕ್ಕೆ ತಲುಪಲಿದೆ. ಕೇರಳ ಕೃಷಿ ಸಚಿವ ಟಿ. ಸಿದ್ದಿಕ್ ಹಾಗೂ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಮಣ್ಣಿನಡಿ ಬೇರೆ ಯಾರಾದರೂ ಸಿಲುಕಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತೀವ್ರ ಹುಡುಕಾಟ ಮುಂದುವರಿದಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *