ಕಾರ್ಕಳ: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಸಿಬಂದಿ-ಅಧಿಕಾರಿಗಳು ಪೊಲೀಸ್ ಇಲಾಖೆಯ ಮನೆ ಮನೆ ಪೊಲೀಸ್ ವಿನೂತನ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಸುತ್ತಿದ್ದು, ಗ್ರಾಮೀಣ ಭಾಗದ ಕಾಡಂಚಿನ ಭಾಗದ ಮನೆಗಳಿಗೂ ತೆರಳಿ ಜನರಿಗೆ ಅರಿವು ಮೂಡಿಸಿ ಗಮನ ಸೆಳೆಯುತ್ತಿದ್ದಾರೆ.

ಮನೆ ಮನೆಗೆ ತೆರಳಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಅಪರಾಧ ಚಟುವಟಿಕೆ ಅಪತ್ತು ಸೇವೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವುದರಿಂದ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸ ಹೆಚ್ಚಿದ್ದು, ತುರ್ತುಸಹಾಯ ಸಂಖ್ಯೆ 112ಕ್ಕೆ ಬರುತ್ತಿರುವ ಕರೆಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಅಲ್ಲದೆ ಇತರೆ ಅಪರಾಧ ಪ್ರಕರಣಗಳಿಗೂ ಕಡಿವಾಣ ಬಿದ್ದಿದೆ.
ಗ್ರಾಮಾಂತರ ಪೊಲೀಸರು ಈದು, ಮಾಳ, ನಿಟ್ಟೆ, ಬಜಗೋಳಿ, ಬೆಳ್ಳಣ್ ಸಹಿತ ಮೊದಲಾದ ಗ್ರಾಮೀಣ ಭಾಗದಲ್ಲಿ ಮನೆಮನೆ ಪೊಲೀಸ್ ಕಾರ್ಯಕ್ರಮವನ್ನು ಹಂತಹಂತವಾಗಿ ಆಯೋಜಿಸುತ್ತಿದ್ದಾರೆ. ಗ್ರಾಮೀಣ ಭಾಗದ ವ್ಯಾಪ್ತಿ ಸಾಕಷ್ಟು ದೂರದೂರ ಇರುವುದರಿಂದ ಈಗಾಗಲೇ ಶೇ.30 ಪೂರ್ಣಗೊಂಡಿದೆ. ಮುಂದಿನ ಹಂತದಲ್ಲಿ ಎಲ್ಲ ಮನೆಗಳನ್ನು ಪೂರ್ಣಗೊಳಿಸುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
10 ಕರೆಗಳಿಂದ 50 ಕರೆಗೆ ಏರಿಕೆ ಮನೆ-ಮನೆ ಪೊಲೀಸ್ ಕಾರ್ಯಕ್ರಮದ ಅನಂತರ ಜನರು ಮುಕ್ತವಾಗಿ ಪೊಲೀಸರೊಂದಿಗೆ ಬೆರೆಯುತ್ತಿದ್ದಾರೆ, ನೇರವಾಗಿ ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ. ನೆರೆಕರೆಯಲ್ಲಿ ಸಣ್ಣಪುಟ್ಟ ಗಲಾಟೆ, ರಸ್ತೆ ಅಪಘಾತ, ಮದ್ಯ ಸೇವನೆ ಜಗಳ ಸಹಿತ ಮೊದಲಾದ ಅಕ್ರಮ ಚಟುವಟಿಕೆ ಬಗ್ಗೆ ದೂರು ಹೇಳಿ ಕರೆ ಬರುತ್ತಿದೆ. ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಹಿಂದೆಲ್ಲ ತಿಂಗಳಿಗೆ 5-10 ಸಾರ್ವನಿಕ ಕರೆಗಳು ಬರುತ್ತಿದ್ದರೆ ಈಗ ಅದು 50ಕ್ಕೇರಿದೆ. ಅಲ್ಲದೆ ಇತ್ತೀಚೆಗೆ ಸೈಬರ್ ಅಪರಾಧಕ್ಕೆ ಸಂಬಂಧಿಸಿ ಪ್ರಕರಣಗಳು ವರದಿಯಾಗಿಲ್ಲ.




