ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಶಾಸಕ ಸಿಮೆಂಟ್ ಮಂಜು

Share with


ಆಲೂರು: ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಗುಣಮಟ್ಟದ ರಸ್ತೆಗಳು ಹಾಗೂ ಮೂಲಸೌಕರ್ಯಗಳು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಆಲೂರು ತಾಲೂಕಿನ ಪಾಳ್ಯ ಹೋಬಳಿಯ ನಿಡನೂರು, ವಿದ್ಯಾ ನಗರ, ಬುಧನಲ್ಲಿ ಹಾಗೂ ಬಸವನಲ್ಲಿ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಬೇಡಿಕೆಯಾಗಿದ್ದ ರಸ್ತೆ ನಿರ್ಮಾಣಕ್ಕೆ, ₹70 ಲಕ್ಷ ವೆಚ್ಚದ ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಜಕೀಯ ರಹಿತ ಅಭಿವೃದ್ಧಿ: ಅಭಿವೃದ್ಧಿ ಕಾಮಗಾರಿಗಳು ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಸೀಮಿತವಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಸಾರ್ವಜನಿಕರ ಹಿತವೇ ತಮ್ಮ ಮುಖ್ಯ ಧ್ಯೇಯವಾಗಿದ್ದು, ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.
ಗುಣಮಟ್ಟದ ಕಾಮಗಾರಿಗೆ ಸೂಚನೆ: ರಸ್ತೆ ಮತ್ತು ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಸರ್ಕಾರ ಅಗತ್ಯ ಅನುದಾನ ನೀಡುತ್ತಿದ್ದು, ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ರಸ್ತೆ ಅಗಲೀಕರಣ ಹಾಗೂ ನಿರ್ಮಾಣಕ್ಕೆ ಗ್ರಾಮಸ್ಥರು ಅಗತ್ಯ ಜಾಗ ಬಿಟ್ಟುಕೊಟ್ಟು ಸಹಕರಿಸಬೇಕೆಂದು ಮನವಿ ಮಾಡಿದರು.
ಮುಂದಿನ ಯೋಜನೆಗಳು: ಮುಂಬರುವ ದಿನಗಳಲ್ಲಿ ಚರಂಡಿ, ದೇವಸ್ಥಾನ, ವಿದ್ಯುತ್ ಸಬ್‌ಸ್ಟೇಷನ್ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ಈಗಾಗಲೇ ಅನುದಾನ ಕಾಯ್ದಿರಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು:
ಈ ಸಂದರ್ಭದಲ್ಲಿ ಬಿಜೆಪಿ ಆಲೂರು-ಕಟ್ಟಾಯ ಮಂಡಲದ ಪ್ರಧಾನ ಕಾರ್ಯದರ್ಶಿ ಕೃಷ್ಣ ಅಬ್ಬನ, ಮುಖಂಡರಾದ ಹನುಮಂತೇಗೌಡ, ಬರನ್, ದೇವರಾಜು, ರಂಗೇಗೌಡ, ಅಣ್ಣೇಗೌಡ, ನಾಗೇಂದ್ರ ಆಚಾರ್, ದಿನೇಶ್, ಗುತ್ತಿಗೆದಾರ ಆರ್ಯನ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *