ವಿದೇಶದಿಂದ ದುಬಾರಿ ಪಾರ್ಸೆಲ್ ಬಂದಿದೆ ಎಂದು ಹೇಳಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ..!

Share with

ಮಂಗಳೂರು: ಗಂಡ ವಿದೇಶದಿಂದ ಚಿನ್ನ, ಲಂಡನ್ ಪೌಂಡ್ಸ್, ಡೈಮಂಡ್ ವಾಚ್ ಮತ್ತು ಬ್ಯಾಗ್ ಹೀಗೆ ಒಟ್ಟು ಸುಮಾರು 5.5 ಕೋಟಿ ಮೌಲ್ಯದ ಸೊತ್ತುಗಳನ್ನು ಪಾರ್ಸಲ್ ಕಳುಹಿಸಿದ್ದಾರೆ. ಅದನ್ನು ಪಡೆದುಕೊಳ್ಳಲು ಹಣ ಪಾವತಿಸಬೇಕು ಎಂದು ನಂಬಿಸಿ 6.84 ಲಕ್ಷ ರೂ. ವಂಚನೆ ಮಾಡಿರುವ ಕುರಿತಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನಲ್ಲಿ ವಾಸವಾಗಿರುವ 44 ವರ್ಷ ಪ್ರಾಯದ ಮಹಿಳೆ ವಂಚನೆಗೊಳಗಾದವರು.

ದುಬೈನಲ್ಲಿ ಕೆಲಸದಲ್ಲಿರುವ ಗಂಡ ಮಹಿಳೆಗೆ ಮನೆಗೆ ಬೇಕಾಗುವ ವಸ್ತುಗಳನ್ನು ಪಾರ್ಸಲ್ ಕಳುಹಿಸುತ್ತಿದ್ದರು. ಎ.21ರಂದು ಲಂಡನ್ ಕೋಡ್ ಇರುವ ನಂಬರ್ ನಿಂದ ಅವರಿಗೆ ವಾಟ್ಸ್ ಆ್ಯಪ್ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ‘ನಿಮ್ಮ ಗಂಡ ಪಾರ್ಸಲ್ ಕಳುಹಿಸಿದ್ದು, ಅದನ್ನು ಫೆಡ್ ಎಕ್ಸ್ ಕರ್ಗೋ ಪಾರ್ಸಲ್ ಗೆ ಹಾಕುವಂತೆ ಹೇಳಿದ್ದಾರೆ’ ಎಂದು ತಿಳಿಸಿದ್ದಾನೆ. ಇದನ್ನು ಆಕೆ ನಿಜವೆಂದೇ ನಂಬಿದ್ದಾರೆ.

ಎ.27ರಂದು ಸಂಜೆ ಮತ್ತೆ ಕರೆ ಮಾಡಿ, ‘ನಿಮ್ಮ ಗಂಡ ಚಿನ್ನ, ಲಂಡನ್ ಫೌಂಡ್ಸ್, ಡೈಮಂಡ್ ವಾಚ್ ಮತ್ತು ಬ್ಯಾಗ್ ಹೀಗೆ ಒಟ್ಟು ಸುಮಾರು 5.5 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಫೆಡ್ ಎಕ್ಸ್ ಏರ್ ಕಾರ್ಗೊದಲ್ಲಿ ಪಾರ್ಸಲ್ ಮಾಡಿರುವುದಾಗಿ ತಿಳಿಸಿದ್ದಾನೆ. ಎ.28 ಕರೆ ಮಾಡಿ ಪಾರ್ಸಲ್ ಬಗ್ಗೆ ಇನ್ನೊಂದು ಭಾರತೀಯ ನಂಬ‌ರ್ ನೀಡಿ, ಕರೆ ಮಾಡಿ ಮಾತನಾಡಲು ತಿಳಿಸಿದ್ದಾನೆ.

ಮಹಿಳೆ ಕರೆ ಮಾಡಿ ಮಾತನಾಡಿದಾಗ ಪಾರ್ಸಲ್ ಡೆಲಿವರಿ ಮಾಡಲು ಕಸ್ಟಮ್ಸ್ ಚಾರ್ಜ್ ಪಾವತಿಸುವಂತೆ ಹೇಳಿ 1,10,500 ರೂ. ಪಡೆದುಕೊಂಡಿದ್ದಾರೆ. ಎ.29 ಮತ್ತೆ ಕರೆ ಮಾಡಿ ಕೋರಿಯರ್ ನಲ್ಲಿ ಬಂದಿರುವ ವಸ್ತುಗಳು ದುಬಾರಿ ವಸ್ತುಗಳಾಗಿದ್ದು, ಇದಕ್ಕೆ ಜಿ.ಎಸ್.ಟಿ. ಚಾರ್ಜಸ್ 4,48,000 ರೂ. ಆಗುತ್ತದೆ ಎಂದು ತಿಳಿಸಿದ್ದಾರೆ. ಮಹಿಳೆ ಅಷ್ಟು ಪಾವತಿಸಲು ಒಪ್ಪದೆ ಇದ್ದಾಗ ಅರ್ಧ ಪಾವತಿಸಲು ತಿಳಿಸಿದ್ದಾರೆ. ಅದರಂತೆ ಮಹಿಳೆ 2,24,000 ರೂ. ಪಾವತಿ ಮಾಡಿದ್ದಾರೆ. ಎ.30ರಂದು ಮತ್ತೆ ಕರೆ ಬಂದಿದ್ದು, ಉಳಿದ ಹಣ ರೂ 2,24,000 ರೂ. ಮತ್ತು ದಾಖಲಾತಿ ಚಾರ್ಜಸ್ 30,000 ರೂ. ಸೇರಿ ಒಟ್ಟು 2,50,000 ರೂ. ವಾಪತಿಸಿದರೆ ಮುಂಬಯಿ ವಿಮಾನ ನಿಲ್ದಾಣದಲ್ಲಿರುವ ಕಾರ್ಗೊ ಕಚೇರಿಯಿಂದ ಪಾರ್ಸಲ್ ಕಳುಹಿಸುವುದಾಗಿ ತಿಳಿಸಿ, ಬ್ಯಾಂಕ್ ಖಾತೆ ನಂಬರ್ ನೀಡಿದ್ದಾರೆ. ಅದರಂತೆ ಬಾಕಿ ಉಳಿದ 2,50,000 ರೂ. ಕೂಡಾ ಪಾವತಿ ಮಾಡಿದ್ದಾರೆ. ಮತ್ತೆ ಕರೆ ಮಾಡಿದ ಅಪರಿಚಿತರು ಪಾರ್ಸಲ್ ನಲ್ಲಿ ಒಂದು ಲಕ್ಷ ಲಂಡನ್ ಪೌಂಡ್ಸ್ ಇದೆ. ಇದನ್ನು ಭಾರತೀಯ ಕರೆನ್ಸಿಗೆ ಬದಲಾಯಿಸಲು 3,80,000 ರೂ. ಚಾರ್ಜ್ ಆಗುತ್ತೆ ಎಂದು ನಂಬಿಸಿದ್ದಾರೆ. ಅದಕ್ಕೆ ಒಪ್ಪದೆ ಇದ್ದಾಗ ಅವರು ಒಂದು ಲಕ್ಷ ಹಾಕಿದಲ್ಲಿ ಲಂಡನ್ ಫೌಂಡ್ಸ್ ನ್ನು ಇಂಡಿಯನ್ ಕರೆನ್ಸಿಗೆ ಚೇಂಜ್ ಮಾಡಿ 32 ಲಕ್ಷ ಡೆಲಿವರಿ ಮಾಡುವುದಾಗಿ ತಿಳಿಸಿದ್ದಾರೆ. ಅದರಂತೆ 1 ಲಕ್ಷ ರೂ. ಕೂಡಾ ಪಾವತಿ ಮಾಡಿದ್ದಾರೆ.

ಹೀಗೆ ಹಂತಹಂತವಾಗಿ 6,84,500 ರೂ. ಹಣವನ್ನು ಪಡೆದು, ಯಾವುದೇ ಪಾರ್ಸಲ್ ಕಳುಹಿಸದೆ ವಂಚಿಸಿ, ಮೋಸ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *