ಪಶ್ಚಿಮ ಬಂಗಾಳದಲ್ಲಿ ‘ಅನ್ನಪೂರ್ಣ ಯೋಜನೆ’ಗೆ ಚಾಲನೆ ನೀಡಿದ ಸುವೇಂದು ಅಧಿಕಾರಿ

Share with

ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರವು ಮಹಿಳೆಯರಿಗಾಗಿ ಮಹತ್ವಾಕಾಂಕ್ಷೆಯ ‘ಅನ್ನಪೂರ್ಣ ಯೋಜನೆ’ಗೆ ಬುಧವಾರ ಅಧಿಕೃತವಾಗಿ ಚಾಲನೆ ನೀಡಿದೆ. ಯೋಜನೆಯ ಮೊದಲ ಹಂತದಲ್ಲೇ ರಾಜ್ಯದ ಬರೋಬ್ಬರಿ 28.25 ಲಕ್ಷ ಅರ್ಹ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು ₹3,000 ಆರ್ಥಿಕ ನೆರವು ಸಿಗಲಿದೆ.

ರಾಜ್ಯ ಸರ್ಕಾರದ ಈ ಹೊಸ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, “ಕಳೆದ ಕೇವಲ ಮೂರೇ ದಿನಗಳಲ್ಲಿ ರಾಜ್ಯದ ಪ್ರಮುಖ ಇಲಾಖೆಗಳು, ಜಿಲ್ಲಾಡಳಿತ, ಬ್ಲಾಕ್ ಅಭಿವೃದ್ಧಿ ಕಚೇರಿಗಳು (BDO), ಪೌರಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳ ಸಮನ್ವಯತೆಯಿಂದಾಗಿ ಒಟ್ಟು 28,25,769 ಅರ್ಹ ಫಲಾನುಭವಿಗಳನ್ನು ಗುರುತಿಸಿ, ಯೋಜನೆಯ ಪ್ರತ್ಯೇಕ ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆ” ಎಂದು ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ ಮತ್ತು ನಮ್ಮ ಡಬಲ್ ಇಂಜಿನ್ ಸರ್ಕಾರದ ಬದ್ಧತೆಯ ಫಲವಾಗಿ ಇಂದು ರಾಜ್ಯದ ಮಹಿಳೆಯರಿಗೆ ಮಾಸಿಕ 3,000 ನೀಡುವ ಭರವಸೆಯನ್ನು ಅತ್ಯಂತ ಯಶಸ್ವಿಯಾಗಿ ಈಡೇರಿಸಲಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ನಿರಂತರವಾಗಿರಲಿದೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಯೋಜನೆಯಡಿ ಹೊಸ ಅರ್ಜಿಗಳ ಸ್ವೀಕಾರ ನಿರಂತರವಾಗಿರಲಿದ್ದು, ಮುಂದಿನ ಮೂರು ತಿಂಗಳ ಅವಧಿಯಲ್ಲಿ ಬಾಕಿ ಇರುವ ಎಲ್ಲಾ ಅರ್ಹ ಮಹಿಳೆಯರ ದಾಖಲೆಗಳನ್ನು ಪರಿಶೀಲಿಸಿ ಯೋಜನೆಯ ವ್ಯಾಪ್ತಿಗೆ ತರಲಾಗುವುದು ಎಂದು ಸರ್ಕಾರ ತಿಳಿಸಿದೆ.

ಅರ್ಜಿಗಳು ಬಂದ ತಕ್ಷಣ ಅವುಗಳ ನೈಜತೆಯನ್ನು ಪರಿಶೀಲಿಸಿ ಅರ್ಹರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 3,000 ಜಮೆ ಮಾಡಲಾಗುವುದು. ರಾಜ್ಯದ ಪ್ರತಿಯೊಬ್ಬ ಅರ್ಹ ಮಹಿಳೆಗೂ ಈ ಯೋಜನೆಯ ಲಾಭ ಸಿಗುವಂತೆ ಮಾಡುವುದೇ ನಮ್ಮ ಗುರಿ” ಎಂದು ಸಿಎಂ ಹೇಳಿದರು. ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ಪ್ರತಿ 7 ದಿನಗಳಿಗೊಮ್ಮೆ ಹೊಸದಾಗಿ ಸೇರ್ಪಡೆಯಾದ ಫಲಾನುಭವಿಗಳ ವಿವರವನ್ನು ಸರ್ಕಾರ ಬಿಡುಗಡೆ ಮಾಡಲಿದೆ.

ಮಹಿಳಾ ಸಾಧಕರ ನಾಡಿಗೆ ಗೌರವ

ಪಶ್ಚಿಮ ಬಂಗಾಳದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ನೆನಪಿಸಿಕೊಂಡ ಸುವೇಂದು ಅಧಿಕಾರಿ, “ಬಂಗಾಳದ ಭೂಮಿ ರಾಣಿ ರಶ್ಮಿನಿಯಿಂದ ಹಿಡಿದು ಸ್ವಾತಂತ್ರ್ಯ ಹೋರಾಟಗಾರ್ತಿ ಮಾತಂಗಿನಿ ಹಜ್ರಾ ಅವರಂತಹ ವೀರ ಮಹಿಳೆಯರನ್ನು ನೀಡಿದ ಪವಿತ್ರ ನಾಡು. ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಳವಳಿಗಳಲ್ಲಿ ಇಲ್ಲಿನ ಮಹಿಳೆಯರ ಪಾತ್ರ ಮುಂಚೂಣಿಯಲ್ಲಿದೆ” ಎಂದು ಶ್ಲಾಘಿಸಿದರು.

ಇದೇ ವೇಳೆ, ಯೋಜನೆಯನ್ನು ಅತ್ಯಂತ ವೇಗವಾಗಿ ಅನುಷ್ಠಾನಗೊಳಿಸಿದ ಬಿಡಿಒ ಕಚೇರಿ, ಮುನ್ಸಿಪಾಲಿಟಿ ಹಾಗೂ ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಧನ್ಯವಾದ ತಿಳಿಸಿದರು. ಇದೇ ವೇಳೆ, ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಮಹಿಳೆಯರಿಗಾಗಿ ‘ಉಚಿತ ಬಸ್ ಪ್ರಯಾಣ’ ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದ್ದು, ನಮ್ಮ ಸರ್ಕಾರ ಮಹಿಳಾ ಕಲ್ಯಾಣಕ್ಕೆ ಸದಾ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.


Share with

Leave a Reply

Your email address will not be published. Required fields are marked *