ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಮುಖ್ಯಮಂತ್ರಿ ಗಾದಿಗೆ ಕಸರತ್ತು ಆರಂಭ: ಮುಖ್ಯಮಂತ್ರಿ ರೇಸ್‌ನಲ್ಲಿ ಮೂವರು ಗಣ್ಯರು

Share with

ತಿರುವನಂತಪುರ: ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ 102 ಸ್ಥಾನಗಳನ್ನು ಪಡೆದು ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಕಸರತ್ತು ಆರಂಭಗೊಂಡಿದೆ.

ಮುಖ್ಯಮಂತ್ರಿ ರೇಸ್‌ನಲ್ಲಿ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್, ಕಾಂಗ್ರೆಸ್‌ನ ಹಿರಿಯ ನೇತಾರ ರಮೇಶ್ ಚೆನ್ನಿತ್ತಲ ಮೊದಲ ಸ್ಥಾನದಲ್ಲಿದ್ದಾರೆ. ಇವರ ಹೊರತಾಗಿ ಕಾಂಗ್ರೆಸ್‌ನ ಕೇಂದ್ರ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡಾ ಇದರಲ್ಲಿ ಒಳಗೊಂಡಿದ್ದಾರೆ.

ಮುಖ್ಯಮಂತ್ರಿ ಆಯ್ಕೆ ಕುರಿತಾದ ಕ್ರಮದಲ್ಲಿ ಪಕ್ಷ ಈಗಾಗಲೇ ತೊಡಗಿದೆಯೆಂದೂ ಈ ವಿಷಯದಲ್ಲಿ ಕೆಲವೇ ದಿನಗಳೊಳಗೆ ತೀರ್ಮಾನ ಉಂಟಾಗಲಿದೆಯೆಂದು ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

ಚುನಾವಣೆಯಲ್ಲಿ ಯುಡಿಎಫ್‌ಗೆ ನೇತೃತ್ವ ನೀಡಿದ್ದು ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ ಆಗಿದ್ದು ಆದ್ದರಿಂದ ಅವರೇ ಮುಖ್ಯಮಂತ್ರಿ ಯಾಗಬೇಕೆಂಬ ಕಠಿಣ ನಿಲುವನ್ನು ಅವರ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ. ವಿ.ಡಿ. ಸತೀಶನ್‌ರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆರಿಸದಿದ್ದಲ್ಲಿ ಅವರು ಪಕ್ಷದೊಳಗೆ ಸಿಡಿದೇಳುವ ಸಾಧ್ಯತೆಯೂ ಇದೆಯೆಂಬ ಭಯವೂ ಇನ್ನೊಂದೆಡೆ ಕಾಂಗ್ರೆಸ್‌ನ್ನು ಕಾಡತೊಡಗಿದೆ. ಪಕ್ಷದ ಅತ್ಯಂತ ಹಿರಿಯ ನೇತಾರ ಎಂಬ ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ರಮೇಶ್ ಚೆನ್ನಿತ್ತಲರಿಗೆ ನೀಡಬೇಕೆಂಬ ಹಕ್ಕು ವಾದವನ್ನು ಇನ್ನೊಂದೆಡೆ ಅವರ ಬೆಂಬಲಿಗರು ಮುಂದಿರಿಸಿದ್ದಾರೆ. ಆದ್ದರಿಂದ ಈ ಮೂವರು ನಾಯಕರನ್ನು ಪರಸ್ಪರ ಸಮಜಾಯಿಸಿ ಒಮ್ಮತ ಮೂಡಿಸದೇ ಇದ್ದಲ್ಲಿ ಅದು ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್‌ಗೆ ಒಂದು ಕಗ್ಗಂಟಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಯಾರಾಗಬೇಕೆಂಬುದು ಕಾಂಗ್ರೆಸ್‌ಗೆ ಸೇರಿದ ಆಂತರಿಕ ವಿಷಯವಾಗಿದೆ. ಈ ವಿಷಯದಲ್ಲಿ ನಾವು ಯಾವುದೇ ರೀತಿಯ ಹಸ್ತಕ್ಷೇಪ ನಡೆಸುವುದಿಲ್ಲ. ಆ ವಿಷಯದಲ್ಲಿ ಕಾಂಗ್ರೆಸ್‌ನಲ್ಲೇ ಒಮ್ಮತ ಮೂಡಿ ಬರಲಿದೆಯೆಂದು ಇನ್ನೊಂದೆಡೆ ಯುಡಿಎಫ್ ಘಟಕ ಪಕ್ಷವಾದ ಮುಸ್ಲಿಂ ಲೀಗ್ ಹೇಳಿದೆ.

ಮುಖ್ಯಮಂತ್ರಿ ಆಯ್ಕೆಗಾಗಿ ಕಾಂಗ್ರೆಸ್ ಕೇಂದ್ರ ಸಮಿತಿ ಮೂವರು ವೀಕ್ಷಕರನ್ನು ನೇಮಿಸಿದೆ. ಇವರು ಇಂದೇ ಕೇರಳಕ್ಕೆ ಆಗಮಿಸಲಿದ್ದು, ನಾಳೆ ಅವರು ಕಾಂಗ್ರೆಸ್‌ನ ರಾಜ್ಯ ನೇತಾರರೊಂದಿಗೆ ಚರ್ಚೆ ನಡೆಸುವರು. ಮಾತ್ರವಲ್ಲ ಈ ವಿಷಯದಲ್ಲಿ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ನ ಎಲ್ಲಾ ಅಭ್ಯರ್ಥಿಗಳ ಅಭಿಪ್ರಾಯವನ್ನು ಅವರು ಆಲಿಸುವರು. ಹೊಸದಾಗಿ ಆಯ್ಕೆಗೊಂಡ ಶಾಸಕರ ಪೈಕಿ ಹೆಚ್ಚು ಬೆಂಬಲ ಹೊಂದಿರುವವರು ಮುಖ್ಯಮಂತ್ರಿಯಾಗಲಿದ್ದಾರೆಂದು ಕೆ.ಸಿ. ವೇಣುಗೋಪಾಲ್ ಇನ್ನೊಂದೆಡೆ ಪರೋಕ್ಷವಾಗಿ ಹೇಳಿಕೆ ನೀಡಿದ್ದು ಆ ಮೂಲಕ ತಾನೂ ಮುಖ್ಯಮಂತ್ರಿ ಸ್ಥಾನ ಆಗ್ರಹಿಸುವ ಸುಳಿವನ್ನು ನೀಡಿದ್ದಾರೆ.


Share with

Leave a Reply

Your email address will not be published. Required fields are marked *