
ಕೆಲಸದ ಸ್ಥಳಗಳಲ್ಲಿ ಕಂಪೆನಿಗಳು ಕೆಲವೊಂದು ಕಟ್ಟುನಿಟ್ಟಾದ ಕ್ರಮಗಳು ಹಾಗೂ ನಿಯಮಗಳನ್ನು ಉದ್ಯೋಗಿಗಳ ಮೇಲೆ ವಿಧಿಸುತ್ತದೆ. ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಬರಬೇಕು, ಇಂತಿಷ್ಟು ಸಂಬಳಕ್ಕೆ ಇಂತಿಷ್ಟು ಗಂಟೆಗಳ ಕಾಲ ಕೆಲಸ ಮಾಡಬೇಕು. ಕೆಲವೊಮ್ಮೆ ಉದ್ಯೋಗಿಗಳು ಈ ಬಾಸ್ ಗಳು ಹೇರುವ ನಿಯಮಗಳಿಗೆ ವಿರೋಧ ವ್ಯಕ್ತಪಡಿಸುತ್ತಾರೆ. ಇದೀಗ ವೈರಲ್ ಆಗಿರುವ ಪೋಸ್ಟ್ ನಲ್ಲಿ ವರ್ಷಕ್ಕೆ 3.8 ಲಕ್ಷ ರೂ ಸಂಬಳ ಪಡೆದರೂ, ಬಾಸ್ ಮಾತ್ರ ದಿನಕ್ಕೆ 12 ಗಂಟೆ ಕೆಲಸ ಮಾಡಿ ಎಂದು ಉದ್ಯೋಗಿಗೆ ಒತ್ತಾಯಿಸಿದ್ದಾರೆ.

ಹೌದು, ರೆಡ್ಡಿಟ್ ಬಳಕೆದಾರರೊಬ್ಬರು ತಮ್ಮ ಮ್ಯಾನೇಜರ್ ಜೊತೆಗೆ ನಡೆಸಿದ ಮಾತುಕತೆಯ ಸ್ಕ್ರೀನ್ಶಾಟ್ ಶೇರ್ ಮಾಡಿಕೊಂಡಿದ್ದು ಇದರಲ್ಲಿ ಕಡಿಮೆ ಸಂಬಳವಾದರೂ ಕೆಲಸದ ಸಮಯ ಹೆಚ್ಚಳ ಮಾಡಿರುವುದನ್ನು ಕಾಣಬಹುದು. ತಮ್ಮ ಬಾಸ್ ಕಳುಹಿಸಿದ ಸಂದೇಶದ ಸ್ಕ್ರೀನ್ ಶಾಟ್ ಜೊತೆಗೆ ‘ನಾನು ವರ್ಷಕ್ಕೆ 3.8 ಲಕ್ಷ ಮೂಲ ವೇತನ ಪಡೆಯುತ್ತಿದ್ದು, ನನ್ನ ಬಾಸ್ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುವಂತೆ ಹೇಳಿದ್ದಾರೆ. ನಾನು ಇದನ್ನು ನಿರಾಕರಿಸಿದಾಗ ಇಂದು ಮ್ಯಾನೇಜರ್ ಇದನ್ನು ಟೆಲಿಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ನನಗೆ ಮುಂದೆ ಏನು ಮಾಡಬೇಕು ಎಂಬುದರ ಕುರಿತು ಯಾರಾದರೂ ಸಲಹೆ ನೀಡಿ ಪ್ಲೀಸ್ ಎಂದು ಬರೆದುಕೊಂಡಿದ್ದಾರೆ.
ಈ ಸ್ಕ್ರೀನ್ ಶಾಟ್ ನಲ್ಲಿ ಬಾಸ್, ನನಗೆ 25ರವರೆಗೆ ಹಗಲು ರಾತ್ರಿ ಕೆಲಸ ಮಾಡುವವರು ಬೇಕು. ಆದ್ದರಿಂದ ಯಾರು ಕೂಡಾ ಅಲ್ಲಿಯವರೆಗೆ ಕಚೇರಿಯನ್ನು ತಪ್ಪಿಸಿಕೊಳ್ಳಬಾರದು. ಯಾರಿಗಾದರೂ ಸಮಸ್ಯೆ ಇದ್ದರೆ ನನಗೆ ಕರೆ ಮಾಡಿ ತಿಳಿಸಿ. ನಾನು ಎಲ್ಲಾ ಸಮಸ್ಯೆಗಳನ್ನೂ ಆಲಿಸಿ ಪರಿಹರಿಸುತ್ತೇನೆ. ಆದರೆ ಕೆಲಸದಲ್ಲಿ ಯಾವುದೇ ಲೋಪವಿದ್ದರೂ ನಾನು ಸಹಿಸುವುದಿಲ್ಲ. ಕೆಲಸದಲ್ಲಿ ಯಾವುದೇ ಅಂತರ ಇರಬಾರದು, ಯಾರಿಗಾದರೂ ಹೆಚ್ಚು ಒತ್ತಡ ಆಗುತ್ತಿದ್ದರೆ. ನೀವು ಬಾತ್ರಾ ಸರ್ ಅವರೊಂದಿಗೆ ಮಾತನಾಡಬಹುದು. ಮತ್ತು ಅವರ ಬಳಿ ತಂಡ ಬದಲಾವಣೆಗೆ ವಿನಂತಿಸಬಹುದು ಎಂದಿದ್ದಾರೆ.




