
ನಡೆದಾಡುವ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅತಿದೊಡ್ಡ ಕೀಲು ಎಂದರೆ ಅದು ಮೊಣಕಾಲು (Knee pain). ಹೀಗಾಗಿ ಅನೇಕ ಸಂದರ್ಭಗಳಲ್ಲಿ ಈ ಕೀಲು ಹಾನಿಗೊಳಗಾಗುತ್ತದೆ. ವಾಹನ ಅಪಘಾತ, ಕ್ರೀಡಾ ಸಮಯದಲ್ಲಿ ಅವಘಡ, ಅಥವಾ ಜಾರಿ ಬಿದ್ದಾಗ ಮೊಣಕಾಲಿಗೆ ಪೆಟ್ಟಾಗುವುದು ಹೆಚ್ಚು. ಹೀಗಾಗಿ ಈ ಮೊಣಕಾಲಿನ ನೋವು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಆದರೆ ಈ ನೋವು ಯಾವುದೋ ಉಳುಕುವಿಕೆಯಿಂದ ಉಂಟಾಗಿದ್ದೋ ಅಥವಾ ಕೀಲು ಗಂಭೀರವಾಗಿ ಸಮಸ್ಯೆಗೆ ಗುರಿಯಾಗಿದೆಯೋ ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ಇಲ್ಲದಿದ್ದಲ್ಲಿ ದೀರ್ಘಕಾಲದ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ

ಮೊಣಕಾಲಿನ ಚಲನೆ ನೋಡಲು ಸಾಮಾನ್ಯ ಎನಿಸಿದರೂ ಇದು ಒಂದು ಸಂಕೀರ್ಣ ಚಲನೆಯೇ ಆಗಿದೆ. ಮೊಣಕಾಲಿನ ಚಿಪ್ಪಿನ ನೈಸರ್ಗಿಕ ಚಲನೆಯಿಂದ ದೀರ್ಘ ಸಮಯದ ವರೆಗೆ ನಿಂತುಕೊಳ್ಳಲು ಹಾಗೂ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗಲು ಮೊಣಕಾಲು ನೆರವಾಗುತ್ತದೆ. ಮೂಳೆ, ಸ್ನಾಯು ಹಾಗೂ ಲಿಗಾಮೆಂಟ್ ರಚನೆಯ ಉತ್ತಮವಾದ ಹೊಂದಾಣಿಕೆಯಿಂದ ಕಾಲಿನ ಚಲನೆ ತಡೆಯಿಲ್ಲದಂತೆ ನಡೆಯಲು ಸಹಕಾರಿಯಾಗುತ್ತದೆ. ಆದರೆ ಮೊಣಕಾಲಿಗೆ ಪೆಟ್ಟಾದಾಗ ಯಾವ ರೀತಿಯ ಸಮಸ್ಯೆ ಎಂದು ಪತ್ತೆಹಚ್ಚುವಲ್ಲಿ ಗೊಂದಲವನ್ನೂ ಉಂಟುಮಾಡುತ್ತದೆ.
ಗಂಭೀರವಾದ ಗಾಯವಾದಾಗ ವೈದ್ಯಕೀಯ ನೆರವು ಅತ್ಯಗತ್ಯ , ಆದರೆ ಬಹಳಷ್ಟು ಮೊಣಕಾಲಿನ ಸಮಸ್ಯೆಯನ್ನ ಸಣ್ಣ ಉಳುಕಿನ ಸಮಸ್ಯೆ , ನಡೆದಾಡಲು ತಡೆಯಿಲ್ಲ ಎಂದು ಭಾವಿಸಿ ಕಡೆಗಣಿಸಲಾಗುತ್ತದೆ. ದಿನ ಕಳೆದಂತೆ ಕಂಡುಬರುವ ಕೆಲ ಗಂಭೀರ ಸಮಸ್ಯೆಯ ಲಕ್ಷಣವನ್ನೂ ಕಡೆಗಣಿಸಲಾಗುತ್ತದೆ. ಹಲವರು ‘ನೀ ಕ್ಯಾಪ್’ ಧರಿಸಿ ಸ್ವಯಂ ಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ನೋವು ತಾಳಲಾರದೇ ವೈದ್ಯರ ನೆರವು ಕೋರಿ ಬರುವಾಗ ಸಮಸ್ಯೆ ಗಂಭೀರ ಹಂತವನ್ನು ತಲುಪಿರುತ್ತದೆ. ಹೀಗಿರುವಾಗ ಮೊಣಕಾಲಿನ ನೋವಿನ ಬಗ್ಗೆ ಕೆಲವು ಅಂಶಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯ.




