

ಬೆಳ್ತಂಗಡಿ: ಬೆಳಾಲಿನ ಕೂಡೋಲುಕೆರೆ ಕಾಡಿನಲ್ಲಿ ಅನಾಥ ಸ್ಥಿತಿಯಲ್ಲಿ ಮೊನ್ನೆ ಮುಂಜಾನೆ ಪತ್ತೆಯಾದ ಹೆಣ್ಣು ಮಗುವಿನ ನಿಜವಾದ ವಾರಿಸುದಾರರು ಯಾರೆಂದು ಇದೀಗ ಕೊನೆಗೂ ಬಹಿರಂಗವಾಗಿದೆ. ಆದರೆ ಈ ಮಗುವಿನ ಕ್ರೂರಿ ಅಪ್ಪ ಮಾತ್ರ ಧರ್ಮಸ್ಥಳ ದೇವಸ್ಥಾನದ ಮುಖ್ಯ ಕೌಂಟರ್ ನ ನೌಕರ ಎಂದು ತಿಳಿದು ಬಂದಿದೆ.
ಮಗುವನ್ನು ಕಾಡಿನಲ್ಲಿ ಬಿಟ್ಟು ಹೋಗಿರುವುದು ಬೆಳಾಲು ಗ್ರಾಮದ ಬಾಗಿದಡಿ ನಿವಾಸಿ ತಿಮ್ಮಪ್ಪ ಗೌಡರ ಮಗ ಧರ್ಮಸ್ಥಳ ದೇವಸ್ಥಾನದ ಮುಖ್ಯ ಕೌಂಟರ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮುಖ್ಯ ನೌಕರ ರಂಜಿತ್ ಎಂಬಾತನಾಗಿದ್ದಾನೆ. ಮತ್ತು ಈ ಹೆಣ್ಣು ಮಗುವನ್ನು ಹೆತ್ತ ಆ ಕರುಣಾಮಯಿ ಪುಣ್ಯಾತ್ಮೆ ಮಹಾತಾಯಿ ಕೂಡಾ ಹಿಂದೆ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಸಮೀಪದ ಪಾಂಗಾಳ ನಿವಾಸಿ ಧರ್ಮಸ್ಥಳ ದೇವಸ್ಥಾನದಲ್ಲಿ ಮುಖ್ಯ ನೌಕರನಾಗಿರುವ ವ್ಯಕ್ತಿಯೊಬ್ಬರ ಮಗಳೆಂದು ತಿಳಿದುಬಂದಿದೆ.
ಧರ್ಮಸ್ಥಳ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ನೌಕರ ರಂಜಿತ್ ಮತ್ತು ಅದೇ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿರುವ ಧರ್ಮಸ್ಥಳ ಪಾಂಗಾಳದ ಇನ್ನೊಬ್ಬ ನೌಕರನ ಮಗಳನ್ನು ಪ್ರೀತಿಸುತ್ತಿದ್ದನೆನ್ನಲಾಗಿದೆ. ಈ ಯುವತಿಯೂ ಧರ್ಮಸ್ಥಳದ ಲಾಡ್ಜ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಹೀಗಾಗಿ ಈಕೆಯನ್ನು ಮದುವೆಯಾಗುತ್ತೇನೆಂದು ಭರವಸೆ ನೀಡಿದ ರಂಜಿತ್ ಆಕೆ ಕರ್ತವ್ಯ ನಿರ್ವಹಿಸುತ್ತಿದ್ದ ಲಾಡ್ಜ್ ನಲ್ಲೇ ಆಕೆ ಜೊತೆ ದೈಹಿಕ ಸಂಪರ್ಕ ನಡೆಸುತ್ತಿದ್ದ. ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಳು. ಆದರೆ ಈಕೆ ಗರ್ಭಿಣಿಯಾಗಿದ್ದೇನೆ ಎಂದು ತಿಳಿಯುತ್ತಲೇ ಧರ್ಮಸ್ಥಳದ ಕೆಲಸವನ್ನು ಬಿಟ್ಟು ಮಂಗಳೂರಿಗೆ ಹೋಗಿ ಅಲ್ಲಿ ಬಾಡಿಗೆ ಮನೆಯೊಂದರಲ್ಲಿ ಇದ್ದುಕೊಂಡು ರಂಜಿತನ ನೆರವಿನಿಂದಲೇ ಬ್ಯೂಟಿ ಪಾರ್ಲರನ್ನು ನಡೆಸತೊಡಗಿದ್ದಳು. ಅಲ್ಲದೆ ಆಕೆ ಇದೇ ಕಾರಣಕ್ಕಾಗಿ ಕಳೆದ ಒಂದು ವರ್ಷ 2 ತಿಂಗಳಿನಿಂದ ತನ್ನ ಪಾಂಗಾಲದ ಮನೆಗೆ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಈಕೆಗೆ ಹೆಣ್ಣು ಮಗುವಾದ ಕಾರಣ ಈ ಮಗುವಿನ ಆರೈಕೆ ನಡೆಸಲು ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಉಪಾಯವೊಂದನ್ನು ಹುಡುಕಿದ ಈ ಯುವತಿ ಮೊನ್ನೆ ದಿನ ಮಗುವಿನೊಂದಿಗೆ ಉಜಿರೆಗೆ ಬಂದು ಯಾವುದೋ ವಿಚಾರ ಒಂದರ ಬಗ್ಗೆ ಮಾತನಾಡಲಿಕ್ಕೆ ಇದೆ ಎಂದು ರಂಜಿತ್’ನನ್ನು ಉಜಿರೆಗೆ ಬರಲು ಹೇಳಿದ್ದಳು. ಇದರಂತೆ ಉಜಿರೆಗೆ ಬಂದಿದ್ದ ರಂಜಿತ್ ನಲ್ಲಿ ಈ ಯುವತಿ ‘ತಾನು ಕರೆನ್ಸಿ ಹಾಕಿಸಿಕೊಂಡು ಬರುತ್ತೇನೆ, ಮಗುವನ್ನು ಸ್ವಲ್ಪ ಹಿಡಿದುಕೊಳ್ಳಿ’ ಎಂದು ಹೇಳಿ ಮಗುವನ್ನು ಆತನ ಕೈಯಲ್ಲಿ ಕೊಟ್ಟು ನಾಪತ್ತೆಯಾಗಿದ್ದಳು. ಆದರೆ ಎಷ್ಟು ಹೊತ್ತಾದರೂ ಈಕೆ ಬಾರದಿದ್ದಾಗ ಆತಂಕಗೊಂಡ ರಂಜಿತ್ ಬೇರೆ ಉಪಾಯವಿಲ್ಲದೆ ಮಗುವನ್ನು ಮುಂಜಾನೆ ಬೆಳಾಲು ಕೂಡೋಲುಕೆರೆ ಕಾಡಿನ ಮಧ್ಯೆ ಬಟ್ಟೆ ಸುತ್ತಿ ಮರದ ಬುಡದಲ್ಲಿರಿಸಿ ಈತನು ಕೂಡಾ ಪರಾರಿಯಾಗಿದ್ದ. ಜತೆಗೆ ಆ ಮೂಲಕ ಸಾರ್ವಜನಿಕರಿಗೆ ಮತ್ತು ಪೊಲೀಸರಿಗೆ ಮಗುವಿನ ಬಾರಿಸುದಾರರನ್ನು ಹುಡುಕುವ ಕೆಲಸ ಕೂಡ ದಯಪಾಲಿಸಿ ಹೋಗಿದ್ದ




