ಪಿಣರಾಯಿ ವಿಜಯನ್ ಪುತ್ರಿಗೆ ’ಇಡಿ’ ಹೊಸ ಸಮನ್ಸ್ ಜಾರಿ

Share with

ಕೊಚ್ಚಿ: ಕೊಚ್ಚಿನ್‌ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್ (CMRL) ಕಂಪನಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ, ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಟಿ. ಅವರಿಗೆ ಜಾರಿ ನಿರ್ದೇಶನಾಲಯ (ED) ಹೊಸದಾಗಿ ಸಮನ್ಸ್ ಜಾರಿ ಮಾಡಿದೆ. ಜೂನ್ 17 ರಂದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ.

ಶುಕ್ರವಾರವೇ (ಇಂದು) ಕೊಚ್ಚಿಯ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ವೀಣಾ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ತಮಗೆ ಅನಾರೋಗ್ಯದ ಸಮಸ್ಯೆ ಇರುವುದರಿಂದ ವಿಚಾರಣೆಗೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ವೀಣಾ ಅವರು ಇಮೇಲ್ ಮೂಲಕ ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಜೂನ್ 17ರ ಬೆಳಗ್ಗೆ 10 ಗಂಟೆಗೆ ಕೊಚ್ಚಿ ಕಚೇರಿಗೆ ಹಾಜರಾಗುವಂತೆ ಹೊಸ ದಿನಾಂಕ ನಿಗದಿಪಡಿಸಿದ್ದಾರೆ.

ಏನಿದು ಎಕ್ಸಾಲಾಜಿಕ್ ಕಂಪನಿ ಹಗರಣ?

ವೀಣಾ ಟಿ. ಒಡೆತನದ ‘ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌’ (Exalogic Solutions) 20 , (CMRL) ಕಂಪನಿಯಿಂದ ಯಾವುದೇ ರೀತಿಯ ಐಟಿ ಸೇವೆಗಳನ್ನು ಒದಗಿಸದೆಯೇ ಬರೋಬ್ಬರಿ 2.78 ಕೋಟಿ ರೂಪಾಯಿ ಹಣವನ್ನು ಕಾನೂನುಬಾಹಿರವಾಗಿ ಪಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇಡಿ ತನಿಖೆಯ ಪ್ರಕಾರ, ಸಿಎಂಆರ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ ಕರ್ತ ಅವರ ನೇತೃತ್ವದ ಮತ್ತೊಂದು ಸಂಸ್ಥೆಯಾದ ‘ಎಂಪವ‌ರ್ ಇಂಡಿಯಾ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್ಸ್’ (EICPL), ವೀಣಾ ಅವರ ಎಕ್ಸಾಲಾಜಿಕ್ ಕಂಪನಿಗೆ 50 ಲಕ್ಷ ರೂಪಾಯಿ ಸಾಲ ನೀಡಿತ್ತು. ಹಳೆಯ ಬಾಕಿಗಳನ್ನು ತೀರಿಸದಿದ್ದರೂ ಈ ಸಾಲ ನೀಡಲಾಗಿದ್ದು, ಈ ಇಡೀ ವಹಿವಾಟು ಕಳ್ಳಹಣವನ್ನು ಬಿಳಿ ಮಾಡುವ ‘ಅಪರಾಧದ ಆದಾಯ’ಎಂದು ಇಡಿ ಶಂಕಿಸಿದೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ತನಿಖಾ ಸಂಸ್ಥೆಯಾದ ಗಂಭೀರ ವಂಚನೆ ತನಿಖಾ ಕಚೇರಿ (SFIO) 2025ರ ಏಪ್ರಿಲ್‌ನಲ್ಲಿ ಎರ್ನಾಕುಲಂ ನ್ಯಾಯಾಲಯದಲ್ಲಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

2019ರ ಜನವರಿಯಲ್ಲೇ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯ ವೇಳೆ ಸಿಎಂಆರ್‌ಎಲ್ ಕಂಪನಿಯಲ್ಲಿ ಸುಮಾರು 130 ಕೋಟಿ ರೂಪಾಯಿ ಮೌಲ್ಯದ ನಕಲಿ ವೆಚ್ಚಗಳು ಮತ್ತು ಆರ್ಥಿಕ ಅಕ್ರಮಗಳು ಪತ್ತೆಯಾಗಿದ್ದವು. ಈಗ ಮಾಜಿ ಸಿಎಂ ಪುತ್ರಿಯೇ ಇಡಿ ಕಣ್ಣಿಗೆ ಬಿದ್ದಿರುವುದರಿಂದ ಕೇರಳ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.


Share with

Leave a Reply

Your email address will not be published. Required fields are marked *