ಮಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮತ್ತು ಇತರ ಹಿಂದೂ ಸಂಘಟನೆಗಳು ಮೇ.2ರಂದು ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ಕರೆ ನೀಡಿವೆ.


ಈ ಬಗ್ಗೆ ಮಾಹಿತಿ ನೀಡಿದ ವಿಎಚ್ಪಿ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್, “ಸುಹಾಸ್ ಶೆಟ್ಟಿ ಹಾಗೂ ಇತರ ಐದು ಜನ ಕಾರ್ಯಕರ್ತರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ‘ಜಿಹಾದಿ ಇಸ್ಲಾಮಿಕ್ ಭಯೋತ್ಪಾದಕ ಮುಸಲ್ಮಾನರು’ ಪೂರ್ವ ಯೋಜಿತವಾಗಿ ದಾಳಿ ನಡೆಸಿ ಸುಹಾಸ್ ಅವರನ್ನು ಹತ್ಯೆ ಮಾಡಿದ್ದಾರೆ. ಇದರ ಹಿಂದೆ ನಿಷೇಧಿತ ಸಂಘಟನೆ ಪಿಎಫ್ಐ ಕೈವಾಡವಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಗಳ ಶೀಘ್ರ ಬಂಧನಕ್ಕೆ ಒತ್ತಾಯಿಸಿ ಶುಕ್ರವಾರ(ಮೇ.2) ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಆಚರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ವಿಎಚ್ಪಿ, ಬಜರಂಗದಳ ಹಾಗೂ ಜಿಲ್ಲೆಯ ಎಲ್ಲಾ ಹಿಂದೂ ಸಂಘಟನೆಗಳು ಈ ಬಂದ್ಗೆ ಬೆಂಬಲ ಸೂಚಿಸಿವೆ ಎಂದು ಅವರು ತಿಳಿಸಿದ್ದಾರೆ. ಬಂದ್ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಲು ಹಾಗೂ ವಾಹನ ಸಂಚಾರವನ್ನು ನಿಲ್ಲಿಸಲು ಸಂಘಟನೆಗಳು ಕರೆ ನೀಡಿವೆ.
ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ವೈಫಲ್ಯವೂ ಎದ್ದು ಕಾಣುತ್ತಿದೆ. ಇದರ ವಿರುದ್ಧವೂ ನಾವು ಹೋರಾಟ ನಡೆಸುತ್ತೇವೆ” ಎಂದು ಶರಣ್ ಪಂಪ್ವೆಲ್ ಎಚ್ಚರಿಸಿದ್ದಾರೆ.




