1.36 ಕೋಟಿ ರೂ.ಮೌಲ್ಯದ ಕ್ರಿಮಿನಾಶಕ ಜಪ್ತಿ..!

Share with

ವಿಜಯಪುರ: ಜಿಲ್ಲೆಯಲ್ಲಿ ನಕಲಿ ಕ್ರಿಮಿನಾಶಕ ತಯಾರಿಕೆ ಜಾಲವನ್ನು ಪೊಲೀಸರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ, 1.36 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಕೊಂಡಗೂಳಿ ಗ್ರಾಮದ ವಿದ್ಯಾಸಾಗರ ಮಲ್ಲಾಬಾದಿ ಹಾಗೂ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಬೋಳನಿ ಗ್ರಾಮದ ಅಮರ ರೆಡ್ಡಿ ಎಂಬುವವರೇ ಬಂಧಿತ ಆರೋಪಿಗಳು. ವಿಜಯಪುರ ನಗರದ ಕೈಗಾರಿಕೆ ಪ್ರದೇಶದ ಗೋದಾಮಿನಲ್ಲಿ ಆರೋಪಿಗಳು ನಕಲಿ ಕ್ರಿಮಿನಾಶಕ ತಯಾರಿಕೆಯಲ್ಲಿ ತೊಡಗಿದ್ದರು. ಬಂಧಿತರಿಂದ ಸುಮಾರು 1,36,98,523 ರೂ. ಮೌಲ್ಯದ ಲೈಪ್ ಅಗೋ ಕೆಮಿಕಲ್ ಹೆಸರಿನಲ್ಲಿರುವ ನಕಲಿ ಕ್ರಿಮಿನಾಶಕಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ತಮ್ಮ ಗೋದಾಮಿಗೆ ಗೋಲ್ಡನ್ ಡ್ರಾಪ್ ಕ್ರಾಪ್ ಪ್ರೊಟೆಕ್ಷನ್ ಎನ್ನುವ ಕಂಪನಿಯ ಬೋರ್ಡ್ ಹಾಕಿದ್ದರು. ಈ ಗೋದಾಮಿನಲ್ಲಿ ಲೈಪ್ ಅಗೋ ಕೆಮಿಕಲ್ ಕಂಪನಿಯ ಹೆಸರಿನಲ್ಲಿ ನಕಲಿ ಕ್ರಿಮಿನಾಶಕಗಳನ್ನು ತಾವೇ ತಯಾರಿಸುತ್ತಿದ್ದರು. ಈ ಔಷಧಗಳಿಗೆ ಲೈಪ್ ಅಗೋ ಕೆಮಿಕಲ್ ಕಂಪನಿಯ ಲೇಬಲ್‌ಗಳನ್ನು ಅಂಟಿಸಿ, ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ನಕಲಿ ಕ್ರಿಮಿನಾಶಕ ತಯಾರಿಕೆ ಮಾಡುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಎಸ್‌ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಸಿಪಿಐ ಮಲ್ಲಯ್ಯ ಮಠಪತಿ ಮಾರ್ಗದರ್ಶನದಲ್ಲಿ ಎಪಿಎಂಸಿ ಠಾಣೆಯ ಪಿಎಸ್‌ಐ ಬಸವರಾಜ ತಿಪರಡ್ಡಿ ಮತ್ತು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ (ಜಾರಿ ದಳ-1) ಅಮಗೊಂಡ ಬಿರಾದಾರ ಮತ್ತು ಸಹಾಯಕ ಕೃಷಿ ನಿರ್ದೇಶಕಿ (ಜಾರಿ ದಳ-2) ರೇಷ್ಮಾ ಸುತಾರ ಹಾಗೂ ಇತರ ಸಿಬ್ಬಂದಿಯನ್ನೊಳಗೊಂಡ ತಂಡ ಈ ಜಂಟಿ ಕಾರ್ಯಾಚರಣೆ ನಡೆಸಿದೆ. ಈ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕಾಪಿರೈಟ್ ಆ್ಯಕ್ಟ್ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *