ಲಿವ್ ಇನ್‌ ಗೆಳೆಯನಿಗೆ ಮಗು ಇಷ್ಟವಿಲ್ಲದ್ದಕ್ಕೆ ಲಾಲಿ ಹಾಡಿ ಮಲಗಿಸಿ ಕೆರೆಗೆ ಎಸೆದ ತಾಯಿ!

Share with

ಜೈಪುರ್‌: ತನ್ನ ಮೊದಲ ಪತಿಯಿಂದ ಜನಿಸಿದ ಮಗು ಲಿವ್ ಇನ್‌ ಗೆಳೆಯನಿಗೆ ಇಷ್ಟವಿಲ್ಲ ಎಂದು ಮಹಿಳೆಯೊಬ್ಬಳು ತನ್ನ ಮಗುವನ್ನು ಕೆರೆಗೆ ಎಸೆದು ಹತ್ಯೆ ಮಾಡಿದ ಪ್ರಕರಣ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ.

ಮಗು ಹತ್ಯೆಗೈದ ಮಹಿಳೆಯನ್ನು ಅಂಜಲಿ (28) ಎಂದು ಗುರುತಿಸಲಾಗಿದ್ದು, ಆಕೆಯನ್ನು ಕ್ರಿಶ್ಚಿಯನ್ ಗಂಜ್ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ತನ್ನ ಮೂರು ವರ್ಷದ ಮಗಳನ್ನು ಲಾಲಿ ಹಾಡಿ ಮಲಗಿಸಿ ಬಳಿಕ ಕೆರೆಗೆ ಎಸೆದಿದ್ದಾಳೆ. ನಂತರ ಮಗು ಕಾಣೆಯಾಗಿದೆ ಎಂದು ನಟಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಹೆಡ್ ಕಾನ್‌ಸ್ಟೆಬಲ್ ಗಸ್ತು ತಿರುಗುವ ವೇಳೆ ಅಂಜಲಿ ಹಾಗೂ ಆಕೆಯ ಪ್ರಿಯಕರ ಎದುರಾಗಿದ್ದರು. ಈ ವೇಳೆ ರಾತ್ರಿ ಸಮಯದಲ್ಲಿ ಇಲ್ಲೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. ಆಗ ತಾನು ತನ್ನ ಮಗಳೊಂದಿಗೆ ಮನೆಯಿಂದ ಹೊರಟಿದ್ದೆ. ಆದರೆ ಮಗು ದಾರಿಯಲ್ಲಿ ಕಾಣೆಯಾಗಿದೆ. ರಾತ್ರಿಯಿಡೀ ಅವಳನ್ನು ಹುಡುಕಿದರೂ, ಆಕೆ ಪತ್ತೆಯಾಗಿಲ್ಲ ಎಂದು ಹೇಳಿದ್ದಳು. ಮರುದಿನ ಮಗುವಿನ ಶವ ಕೆರೆಯಲ್ಲಿ ಪತ್ತೆಯಾಗಿತ್ತು.

ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ, ಅಂಜಲಿ ತನ್ನ ಮಗಳನ್ನು ಎತ್ತಿಕೊಂಡು ನಗರದ ಅನಾ ಸಾಗರ್ ಕೆರೆಯ ಬಳಿ ಓಡಾಡಿದ್ದು ಪತ್ತೆಯಾಗಿತ್ತು. ಕೆಲವು ಗಂಟೆಗಳ ನಂತರ, ಬೆಳಗಿನ ಜಾವ 1:30ರ ಸುಮಾರಿಗೆ, ಮಹಿಳೆ ಒಬ್ಬಂಟಿಯಾಗಿ, ಮೊಬೈಲ್‌ನಲ್ಲಿ ಮಾತಾಡುತ್ತಿರುವುದು ಸೆರೆಯಾಗಿತ್ತು. ಈ ದೃಶ್ಯಗಳು ಅವಳ ಹೇಳಿಕೆಗೆ ವಿರುದ್ಧವಾಗಿದ್ದು, ಅನುಮಾನ ಹುಟ್ಟಿಸಿತ್ತು. ಆಕೆಯನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಅಂಜಲಿ ಒಬ್ಬಂಟಿಯಾಗಿ ಈ ಕೃತ್ಯ ಎಸಗಿದ್ದಾಳೆ ಎಂಬುದು ಗೊತ್ತಾಗಿದೆ. ಮಗಳಿಗೆ ಆಕೆಯ ಲಿವ್‌ ಇನ್‌ ಗೆಳೆಯ ಅಲ್ಕೇಶ್ ನಿರಂತರವಾಗಿ ನಿಂದಿಸುತ್ತಿದ್ದಿದ್ದರಿಂದ ಆಕೆ ಬೇಸತ್ತಿದ್ದಳು ಎಂದು ವರದಿಯಾಗಿದೆ. ಈ ಕೊಲೆಯಲ್ಲಿ ಆಕೆಯ ಪ್ರಿಯಕರನ ಪಾತ್ರವಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ.

ಅಂಜಲಿ ಉತ್ತರ ಪ್ರದೇಶದ ವಾರಣಾಸಿಯವಳು. ಪತಿಯಿಂದ ದೂರಾದ ನಂತರ ಆಕೆ ಅಜ್ಮೀರ್‌ಗೆ ತೆರಳಿ ತನ್ನ ಪ್ರಿಯಕರನೊಂದಿಗೆ ವಾಸವಾಗಿದ್ದಳು. ಅಲ್ಲಿ ಹೋಟೆಲ್‌ ಒಂದರಲ್ಲಿ ಸ್ವಾಗತಕಾರಳಾಗಿ ಕೆಲಸ ಮಾಡುತ್ತಿದ್ದಳು. ಅದೇ ಹೋಟೆಲ್‌ನಲ್ಲಿ ಅಲ್ಕೇಶ್ ಕೂಡ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.


Share with

Leave a Reply

Your email address will not be published. Required fields are marked *