ಜನದಟ್ಟಣೆ, ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟದಂತಹ ವಿಷಯಗಳ ಬಗ್ಗೆ ಆಗಾಗ್ಗೆ ಟೀಕೆಗಳನ್ನು ಇತ್ತೀಚೆಗೆ ರೈಲ್ವೆ ಇಲಾಖೆ ಎದುರಿಸುತ್ತಲೇ ಇದೆ. ಈಗ ಮತ್ತೊಂದು ಸಮಸ್ಯೆಗೆ ರೈಲ್ವೆ ಇಲಾಖೆ ತುತ್ತಾಗಿದೆ. ಹೌದು, ಪುರುಷೋತ್ತಮ್ ಎಕ್ಸ್ಪ್ರೆಸ್ನ ಫಸ್ಟ್ ಎಸಿ ಕೋಚ್ನಲ್ಲಿ ಪ್ರಯಾಣಿಕರು ಬೆಡ್ಶೀಟ್, ಟವೆಲ್ ಕದ್ದ ಘಟನೆ ನಡೆದಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ, ಪ್ರಯಾಣಿಕರು ಎಸಿ ಕೋಚ್ನಿಂದ ಇಳಿಯುತ್ತಿದ್ದಾಗ, ರೈಲ್ವೆ ಇಲಾಖೆ ಪ್ರಯಾಣಿಕರಿಗೆ ನೀಡಿದ ಬೆಡ್ಶೀಟ್ ಮತ್ತು ಟವೆಲ್ಗಳನ್ನು ಖದೀಮರು ತಮ್ಮ ಬ್ಯಾಗ್ಗಳಲ್ಲಿ ತುಂಬಿಕೊಂಡಿರುವುದು ಕಂಡುಬಂದಿದೆ.
ತಪ್ಪಾಯ್ತು ಬಿಟ್ಬಿಡಿ ಎಂದ ಕಿಲಾಡಿಗಳು
ಬೆಡ್ಶೀಟ್ ಕದ್ದು ಹೊರಡುವಾಗ ರೈಲ್ವೆ ಸಿಬ್ಬಂದಿಗೆ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ರೈಲ್ವೆ ಸಿಬ್ಬಂದಿ ಅವರನ್ನು ಹಿಡಿದು ಬ್ಯಾಗ್ ಪರಿಶೀಲಿಸಿದಾಗ ಹತ್ತಕ್ಕೂ ಹೆಚ್ಚು ಬೆಡ್ಶೀಟ್, ಟವಲ್ ಕದ್ದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ʻನಾವು ಮಾಡಿದ್ದು ತಪ್ಪು ನಮ್ಮನ್ನು ಬಿಟ್ಟುಬಿಡಿʼ ಎಂದು ಖತರ್ನಾಕ್ ಕೇಳಿಕೊಂಡಿದ್ದಾರೆ.
ಪುರುಷೋತ್ತಮ ಎಕ್ಸ್ಪ್ರೆಸ್ನ 1ನೇ ಎಸಿಯಲ್ಲಿ ಪ್ರಯಾಣಿಸುವುದು ಹೆಮ್ಮೆಯ ವಿಚಾರ. ಪ್ರಯಾಣದ ಸಮಯದಲ್ಲಿ ಹೆಚ್ಚುವರಿ ಸೌಕರ್ಯಕ್ಕಾಗಿ ಪ್ರಯಾಣಿಕರಿಗೆ ಬೆಡ್ಶೀಟ್ಗಳನ್ನು ಒದಗಿಸಲಾಗುತ್ತದೆ. ಅದನ್ನು ಕದ್ದು ಮನೆಗೆ ತೆಗೆದುಕೊಂಡು ಹೋಗಲು ಹಿಂಜರಿಯದ ಜನರು ಇನ್ನೂ ಇದ್ದಾರೆ ನೋಡಿ ಎಂದು ಶೀರ್ಷಿಕೆ ಕೊಟ್ಟು bapisahoo ಎಂಬ ಎಕ್ಸ್ ಬಳಕೆದಾರರು ಪೋಸ್ಟ್ ಹಂಚಿಕೊಂಡಿದ್ದಾರೆ.
ಖದೀಮರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಡಿಯೋ ತಲುಪಿಸಲಾಗಿದೆ ಎಂದು ರೈಲ್ವೆ ಇಲಾಖೆ ರೀಟ್ವೀಟ್ ಮಾಡಿದೆ.




