ಟಾಲಿವುಡ್ ಸ್ಟಾರ್ ನಿರ್ದೇಶಕ ರಾಜಮೌಳಿ (Rajamouli) ಅವರು ಯಾವುದೇ ಪ್ರಾಜೆಕ್ಟ್ ಕೈಗೆತ್ತಿಕೊಂಡರೂ ಅದರಲ್ಲಿ ಒಂದು ವಿಶೇಷತೆ ಇರುತ್ತದೆ. ಸಿನಿಮಾ ಅದ್ದೂರಿಯಾಗಿ ಮೂಡಿ ಬರುತ್ತದೆ. ಸಿನಿಮಾದ ದೃಶ್ಯಗಳನ್ನು ಥಿಯೇಟರ್ನಲ್ಲಿ ಕುಳಿತು ನೋಡುವಾಗ ಮೈ ರೋಮಾಂಚನ ಆಗುತ್ತದೆ. ಈಗ ಅವರ ಮೇಲೆ ಕೃತಿ ಚೌರ್ಯದ ಆರೋಪ ಕೇಳಿ ಬಂದಿದೆ. ‘ವಾರಣಾಸಿ’ ಟೀಸರ್ ನೋಡಿ ಅನೇಕರು ಇದನ್ನು ಹಾಲಿವುಡ್ ಸಿನಿಮಾ ದೃಶ್ಯಗಳಿಗೆ ಹೋಲಿಕೆ ಮಾಡಿದ್ದಾರೆ.
ರಾಜಮೌಳಿ ಅವರು ‘ಮಗಧೀರ’, ‘ಈಗ’, ‘ಬಾಹುಬಲಿ’, ‘ಬಾಹುಬಲಿ 2’, ‘ಆರ್ಆರ್ಆರ್’ನಂತಹ ಸಿನಿಮಾಗಳನ್ನು ನೀಡಿದ್ದಾರೆ. ಇವೆಲ್ಲವೂ ಫ್ಯಾಂಟಸಿ ಚಿತ್ರಗಳು. ಈ ಸಿನಿಮಾಗಳಲ್ಲಿ ಅವರ ಆಲೋಚನಾ ಶಕ್ತಿ ಪ್ರೇಕ್ಷಕರನ್ನು ವಿಸ್ಮಯಗೊಳಿಸುತ್ತದೆ. ಆದರೆ, ಕೆಲವು ದೃಶ್ಯಗಳು ಬೇರೆ ಬೇರೆ ಸಿನಿಮಾಗಳ ದೃಶ್ಯಗಳಿಗೆ ಹೋಲಿಕೆ ಆಗಿದ್ದು ಇದೆ. ಈ ಸಂದರ್ಭದಲ್ಲಿ ಅವರು ಟೀಕೆ ಎದುರಿಸಿದ್ದರು.
ಈಗ ರಾಜಮೌಳಿ ಅವರ ‘ವಾರಣಾಸಿ’ ಟೀಸರ್ನ ದೃಶ್ಯಗಳ ಮೇಲೂ ಕೃತಿ ಚೌರ್ಯದ ಆರೋಪ ಎದುರಾಗಿದೆ. ನೆಟ್ಟಿಗರು ಬೇರೆ ಬೇರೆ ಹಾಲಿವುಡ್ ಸಿನಿಮಾಗಳಿಗೆ ‘ವಾರಣಾಸಿ’ ಚಿತ್ರದ ದೃಶ್ಯವನ್ನು ಹೋಲಿಕೆ ಮಾಡುತ್ತಿದ್ದಾರೆ. ಒರಿಜಿನಲ್ ದೃಶ್ಯ ಹಾಗೂ ರಾಜಮೌಳಿ ವರ್ಷನ್ ಎಂದು ಫೋಟೋ ಸಮೇತ ಹಾಕಲಾಗಿದೆ. ಎರಡರ ಮಧ್ಯೆ ಸಾಮ್ಯತೆ ಇದೆ.





