ಮಾಸ್ಕೋ: ವಾಟ್ಸ್ಆ್ಯಪ್ ನಿಷೇಧದತ್ತ ದಿಟ್ಟ ನಿರ್ಧಾರ ಕೈಗೊಂಡಿರುವ ರಷ್ಯಾ, ಸಂಪೂರ್ಣವಾಗಿ ತಮ್ಮ ದೇಶದಲ್ಲಿ ಈ ಚಾಟಿಂಗ್ ಆ್ಯಪ್ಗೆ ಪುಲ್ಸ್ಟಾಪ್ ಹಾಕಲು ಮುಂದಾಗಿದೆ. ರಷ್ಯಾದ ಕಾನೂನನ್ನು ಪಾಲಿಸಲು ವಾಟ್ಸ್ಆ್ಯಪ್ ವಿಫಲವಾದರೆ, ದೇಶದಲ್ಲಿ ಚಾಟಿಂಗ್ ಆ್ಯಪ್ ಅನ್ನು ಶಾಶ್ವತವಾಗಿ ನಿಷೇಧಿಸುವುದಾಗಿ ರಷ್ಯಾದ ರಾಜ್ಯ ಸಂವಹನ ಕಾವಲು ಸಂಸ್ಥೆ ಬೆದರಿಕೆ ಹಾಕಿದೆ. ಇದು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ಹರಿದಾಡುತ್ತಿದೆ.

ಮೆಟಾ ನಿರ್ವಹಣೆ ರಷ್ಯಾದ ಅಧಿಕಾರಿಗಳಿಗೆ ಮಾಹಿತಿಯನ್ನು ಒದಗಿಸುವಲ್ಲಿ ವಿಫಲವಾಗಿದೆ ಎನ್ನಲಾಗಿದೆ. ಸಂಸ್ಥೆ ಜನರ ಡೇಟಾವನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದೆ ಮತ್ತು ದಿಕ್ಕು ತಪ್ಪಿಸುತ್ತಿದೆ ಎಂಬುದು ರಷ್ಯಾ ವಾದ. ರಾಷ್ಟ್ರದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದಿದ್ದಾಗ ವಾಟ್ಸ್ಆ್ಯಪ್ ಅವಶ್ಯಕತೆ ನಮಗೇಕೆ ಎಂಬ ಪ್ರಶ್ನೆ ಇಲ್ಲಿ ಉದ್ಬವಿಸಿದೆ. ವಾಟ್ಸ್ಆ್ಯಪ್ ಪರ್ಯಾಯವಾಗಿ ದೇಶೀಯ ಅಪ್ಲಿಕೇಶನ್‌ಗಳನ್ನು ಆಯ್ಕೆ ಮಾಡಲು ಬಳಕೆದಾರರಿಗೆ ಸಲಹೆ ನೀಡಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ರಷ್ಯಾ ಆಗ್ರಹವೇನು?
ಕ್ರಿಮಿನಲ್ಗಳ ಚುಟುವಟಿಕೆ ಮತ್ತು ಸಂಚುಕೋರರ ಕೈವಾಡವನ್ನು ಪತ್ತೆಹಚ್ಚಲು ನಮಗೆ ಜನರ ಟೆಲಿಗ್ರಾಮ್ ಮತ್ತು ವಾಟ್ಸ್ಆ್ಯಪ್ ಡೇಟಾಗಳ ಪರಿಶೀಲನೆ ಅಗತ್ಯವಿದೆ. ಇದಕ್ಕೆ ಮೆಟಾ ಸಂಸ್ಥೆ ಅನುಮತಿ ನೀಡಿ, ನಮ್ಮೊಂದಿಗೆ ಸಹಕರಿಸಬೇಕು. ಇದು ಸಾಧ್ಯವಾದರೆ, ನಾವು ಜನರ ಡೇಟಾಗೆ ಸುಲಭವಾಗಿ ಪ್ರವೇಶಿಸಬಹುದು ಎಂಬುದು ರಷ್ಯಾ ಬೇಡಿಕೆ.
ಒಪ್ಪದ ಮೆಟಾ
ಟೆಲಿಗ್ರಾಮ್ ಮತ್ತು ವಾಟ್ಸ್ಆ್ಯಪ್ ಪ್ರಸ್ತುತ ರಷ್ಯಾದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಆದಾಗ್ಯೂ, ರಷ್ಯಾದ ಸರ್ಕಾರವು ಕಳೆದ ಕೆಲವು ದಿನಗಳಿಂದ ಜನರ ಡೇಟಾಗೆ ಪ್ರವೇಶಿಸಲು ತೀರ ಒತ್ತಾಯಿಸುತ್ತಿದೆ. ಇದಕ್ಕೆ ಮೆಟಾ ಒಪ್ಪದ ಹಿನ್ನೆಲೆ ಆಗಸ್ಟ್‌ನಿಂದ ರಷ್ಯಾ ವಾಟ್ಸ್ಆ್ಯಪ್ ಕಾಲ್ಗಳನ್ನು ನಿಷೇಧಿಸಿದೆ. ಆದಾಗ್ಯೂ, ಮೆಟಾ ಜನರ ಡೇಟಾವನ್ನು ಹಂಚಿಕೊಳ್ಳಲು ಕಿಂಚಿತ್ತು ಒಪ್ಪದ ಕಾರಣ, ರಷ್ಯಾ ವಾಟ್ಸಾಪ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ತೆರೆಮೆರೆಯಲ್ಲಿ ಕೆಲಸ ಮಾಡುತ್ತಿದೆ ಎಂದು ರೂಟರ್ಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ




