ನಟಿ ಆಶಿಕಾ ರಂಗನಾಥ್ ಸಂಬಂಧಿ ಆತ್ಮಹತ್ಯೆ..! ಪ್ರಿಯಕರನ ಕಿರುಕುಳದಿಂದ ಬೇಸತ್ತು ಸಾವು

Share with

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿಯಾಗಿರುವ ಯುವತಿಯೊಬ್ಬಳು ಪ್ರೀತಿಸಿದ ಯುವಕನಿಂದ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮ*ಹತ್ಯೆ ಮಾಡಿಕೊಂಡಿರುವ ದುರ್ಘಟನೆ ವರದಿಯಾಗಿದೆ. ಘಟನೆ ನಡೆದು 10 ದಿನಗಳು ಕಳೆದರೂ ಆರೋಪಿಗಳನ್ನು ಬಂಧಿಸದಿರುವುದು ಯುವತಿಯ ಪೋಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹಾಸನ ಮೂಲದ, ನಟಿ ಆಶಿಕಾ ರಂಗನಾಥ್ ಅವರ ಮಾವನ ಮಗಳಾದ ಅಚಲಾ (22) ಆತ್ಮ*ಹತ್ಯೆಗೆ ಶರಣಾದ ಯುವತಿ. ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರುವ ತಯಾರಿಯಲ್ಲಿದ್ದ ಅಚಲಾ, ನವೆಂಬರ್ 21ರಂದು ಬೆಂಗಳೂರಿನ ಪಾಂಡುರಂಗ ನಗರದ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಚಲಾ ಅವರು ತಮ್ಮ ದೂರದ ಸಂಬಂಧಿ, ಹಾಸನ ನಗರದ ನಿವಾಸಿಯಾದ ಮಯಾಂಕ್ ಎಂಬಾತನೊಂದಿಗೆ ಸ್ನೇಹ ಹೊಂದಿದ್ದರು. ಮಯಾಂಕ್ ಪ್ರೀತಿಸುವ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿ ಅಚಲಾ ಅವರನ್ನು ಸುತ್ತಾಡಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, ಮದುವೆಗೂ ಮುನ್ನವೇ ದೈಹಿಕ ಸಂಬಂಧಕ್ಕೆ ಪದೇ ಪದೇ ಪೀಡಿಸಿದ್ದಾನೆ ಎನ್ನಲಾಗಿದೆ.

ಈತ ಡ್ರಗ್ ಅಡಿಕ್ಟ್ ಕೂಡ ಆಗಿದ್ದ

ಪ್ರೇಮಿಯಿಂದ ದೈಹಿಕ ಸಂಪರ್ಕದ ಒತ್ತಾಯಕ್ಕೆ ಅಚಲಾ ಒಪ್ಪದಿದ್ದಾಗ, ಆರೋಪಿ ಮಯಾಂಕ್ ಆಕೆಗೆ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಈತ ಡ್ರಗ್ ಅಡಿಕ್ಟ್ ಕೂಡ ಆಗಿದ್ದ ಎಂದು ಆರೋಪಿಸಲಾಗಿದ್ದು, ಪದೇ ಪದೇ ಫೋನ್‌ಮಾಡಿ ಕಿರುಕುಳ ನೀಡುತ್ತಿದ್ದರಿಂದಲೇ ಮಗಳು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಯುವತಿಯ ತಾಯಿ ಕಣ್ಣೀರು ಹಾಕಿದ್ದಾರೆ.

ಆರೋಪಿಗಳ ಬಂಧನಕ್ಕೆ ಆಗ್ರಹ

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಯಾಂಕ್ ಹಾಗೂ ಆತನ ತಾಯಿ ಮೈನಾ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಘಟನೆ ನಡೆದು 10 ದಿನಗಳೇ ಕಳೆದರೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ನನ್ನ ಮಗಳ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಅಚಲಾ ಅವರ ಪೋಷಕರು ಪೊಲೀಸರನ್ನು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *