ಇಬ್ಬರು ಪತ್ನಿಯರನ್ನು ಸಾಕಲು, ಜೂಜಿಗಾಗಿ ಕಳ್ಳತನ..! ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Share with

ಬೆಂಗಳೂರು: ಇಬ್ಬರು ಪತ್ನಿಯರ ನಿರ್ವಹಣೆಗಾಗಿ ಮನೆ ಕಳ್ಳತನ ಮಾಡಿ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ.ಹಳ್ಳಿ ನಿವಾಸಿ ಮೊಹಮ್ಮದ್ ಇಸ್ರಾರ್(35) ಬಂಧಿತ ಆರೋಪಿ. ಈತನಿಂದ 70 ಲಕ್ಷ ರೂ. ಮೌಲ್ಯದ 50 4 ಗ್ರಾಂ ಚಿನ್ನಾಭರಣ, 1.4 ಕೆ.ಜಿ. ಬೆಳ್ಳಿಯ ವಸ್ತುಗಳು ಹಾಗೂ 34 ಸಾವಿರ ರೂ. ವಶಕ್ಕೆ ಪಡೆಯಲಾಗಿದೆ.

ಆರೋಪಿ ಮೊಹಮ್ಮದ್ ಇಸ್ರಾರ್ ಕ್ಯಾಸಿನೋ ಜೂಜಾಟ ಚಟ ಹೊಂದಿದ್ದಾನೆ. ಸುಮಾರು 3-4 ವರ್ಷಗಳಿಂದ ಮನೆ ಕಳ್ಳತನ ಕೃತ್ಯದಲ್ಲಿ ತೊಡಗಿದ್ದು, ಚಿನ್ನಾಭರಣ, ನಗದು ಕಳವು ಮಾಡುತ್ತಿದ್ದ. ಬಳಿಕ ಶ್ರೀಲಂಕಾದ ಕ್ಯಾಸಿನೋಗೆ ಹೋಗಿ ಲಕ್ಷಾಂತರ ರೂ. ಹೂಡಿಕೆ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದ. ಅಲ್ಲದೆ, ಆರೋಪಿ ಎರಡು ಮದುವೆಯಾಗಿದ್ದಾನೆ.

ಕೆ.ಜಿ.ಹಳ್ಳಿಯಲ್ಲಿ ಮೊದಲ ಪತ್ನಿ ಮತ್ತು ಮಗು ಜತೆ ವಾಸವಾಗಿದ್ದ. ಈ ಮಧ್ಯೆ ಕೆಲ ವರ್ಷಗಳ ಹಿಂದೆ ಪಬ್ ವೊಂದರಲ್ಲಿ ಪರಿಚಯವಾದ ಲೈವ್ ಬ್ಯಾಂಡ್ ಯುವತಿಯನ್ನು 2ನೇ ಮದುವೆಯಾಗಿದ್ದು, ಆಕೆ ಜತೆ ಹೈದರಾಬಾದ್‌ನಲ್ಲಿ ಸಂಸಾರ ಮಾಡುತ್ತಿದ್ದಾನೆ. ತಿಂಗಳಲ್ಲಿ 3-4 ಬಾರಿ ಹೈದರಾಬಾದ್‌ಗೆ ಹೋಗಿ ಬರುತ್ತಾನೆ. ಹೋಗುವ ಮೊದಲು ಕಳ್ಳತನ ಮಾಡಿಕೊಂಡು ಒಂದಷ್ಟು ಹಣವನ್ನು ಕೊಂಡೊಯ್ದು ಆಕೆಗೆ ಕೊಡುತ್ತಿದ್ದ. ಬಾಕಿ ಹಣವನ್ನು ತನ್ನ ಮೊದಲ ಪತ್ನಿ ಮತ್ತು ಮಗುವಿನ ನಿರ್ವಹಣೆಗೆ ಬಳಸುತ್ತಿದ್ದ ಎಂಬುದು ಗೊತ್ತಾಗಿದೆ. ವೈಟ್‌ಫೀಲ್ಡ್ ಡಿಸಿಪಿ ಕೆ.ಪರಶುರಾಮ್, ಎಸಿಪಿ ರೀನಾ ಸುವರ್ಣಾ, ಕೆ.ಆರ್.ಪುರ ಪಿಐ ಬಿ.ರಾಮಮೂರ್ತಿ ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ.

ಪ್ರತಿ ಬಾರಿ ಕಳತನ ಬಳಿಕ ಮೊಬೈಲ್ ನಂಬರ್ ಬದಲು

ಕಳೆದ 3 ವರ್ಷಗಳಿಂದ ಆರೋಪಿ ಕಳ್ಳತನ ಕೃತ್ಯದಲ್ಲಿ ತೊಡಗಿದ್ದಾನೆ. ಈತನ ವಿರುದ್ಧ ಕೆ.ಆ‌ರ್.ಪುರದಲ್ಲಿ 16 ಮನೆ ಕಳವು, ರಾಮಮೂರ್ತಿನಗರ ಠಾಣೆಯಲ್ಲಿ 1 ಮನೆ ಕಳವು ಪ್ರಕರಣಗಳು ದಾಖಲಾಗಿವೆ. ಪ್ರತಿ ಬಾರಿ ಕಳ್ಳತನ ಮಾಡುವ ಮೊದಲು ಮತ್ತು ನಂತರ ಬಟ್ಟೆ ಬದಲಾವಣೆ ಮಾಡುತ್ತಿದ್ದ. ಅಲ್ಲದೆ, ಕೃತ್ಯ ಎಸಗಿದ ಬಳಿಕ ತನ್ನ ಬೈಕ್ ನಂಬರ್‌ಅನ್ನು ಕೂಡ ಬದಲಾವಣೆ ಮಾಡಿ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದ. ಆದರೆ, ಇತ್ತೀಚೆಗೆ ಆರೋಪಿ ಬಗ್ಗೆ ನಿರಂತರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.


Share with

Leave a Reply

Your email address will not be published. Required fields are marked *