ಇಂಡೋ-ಸೌತ್ ಆಫ್ರಿಕಾ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಆರ್ಭಟ ಜೋರಾಗಿದೆ. ಆಫ್ರಿಕನ್ ಬೌಲರ್ಗಳ ಮೇಲೆ ಸವಾರಿ ಮಾಡ್ತಿರೋ ರನ್ಮಷೀನ್ ಬೌಂಡರಿ, ಸಿಕ್ಸರ್ಗಳ ಸುರಿಮಳೆ ಸುರಿಸ್ತಿದ್ದಾರೆ. ವಿರಾಟ್ ರೂಪ ದರ್ಶನಕ್ಕೆ ಸೌತ್ ಆಫ್ರಿಕಾ ಸ್ಟನ್ ಆಗಿದ್ರೆ, ಫ್ಯಾನ್ಸ್ಗೆ ಫುಲ್ ಮೀಲ್ಸ್ ಎಂಟರ್ಟೈನ್ಮೆಂಟ್ ಸಿಗ್ತಿದೆ. ಈ ಅಬ್ಬರದ ಆಟದ ನಡುವೆ ಅಭಿಮಾನಿಗಳಿಗೆ ಕೊಹ್ಲಿ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಟೀಮ್ ಇಂಡಿಯಾ ಪರ ಪಂದ್ಯವಿಲ್ಲದ ಸಮಯದಲ್ಲಿ ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕು ಅನ್ನೋ ನಿಯಮಕ್ಕೆ ವಿರಾಟ್ ತಲೆಬಾಗಿದ್ದಾರೆ. ಸೌತ್ ಆಫ್ರಿಕಾ ಸರಣಿ ಅಂತ್ಯದ ಬಳಿಕ ದೇಶಿ ಒನ್ ಡೇ ಕ್ರಿಕೆಟ್ ಟೂರ್ನಿ ವಿಜಯ್ ಹಜಾರೆ ಟೂರ್ನಿಯನ್ನಾಡಲು ವಿರಾಟ್ ಕೊಹ್ಲಿ ಮುಂದಾಗಿದ್ದಾರೆ. ಆರಂಭದಲ್ಲಿ ವಿಜಯ್ ಹಜಾರೆ ಟೂರ್ನಿಯನ್ನಾಡಲು ವಿರಾಟ್ ಕೊಹ್ಲಿ ಹಿಂದೇಟು ಹಾಕಿದ್ರು. ಆದ್ರೆ, ಅಂತಿಮವಾಗಿ ಡೊಮೆಸ್ಟಿಕ್ ಕ್ರಿಕೆಟ್ ಆಡುವಂತೆ ವಿರಾಟ್ ಕೊಹ್ಲಿಯ ಮನವೊಲಿಸುವಲ್ಲಿ ಬಿಸಿಸಿಐ ಬಾಸ್ಗಳು ಕೊನೆಗೂ ಯಶಸ್ವಿಯಾಗಿದ್ದಾರೆ.
15 ವರ್ಷಗಳ ಬಳಿಕ ವಿಜಯ್ ಹಜಾರೆ ಕಣಕ್ಕೆ ಕೊಹ್ಲಿ
2010.. ಬರೋಬ್ಬರಿ 15 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಕೊನೆಯದಾಗಿ ವಿಜಯ ಹಜಾರೆ ಟೂರ್ನಿ ಆಡಿದ್ರು. ಬಳಿಕ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಬ್ಯುಸಿಯಾಗಿದ್ದ ವಿರಾಟ್, ಇದೀಗ ಮತ್ತೆ ಡೊಮೆಸ್ಟಿಕ್ ಅಂಗಳಕ್ಕೆ ಮರಳಲು ಸಜ್ಜಾಗಿದ್ದಾರೆ. ಈಗಾಗಲೇ ಡೆಲ್ಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಶನ್ಗೆ ವಿರಾಟ್ ಕೊಹ್ಲಿ ತನ್ನ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. DDCA ಅಧ್ಯಕ್ಷ ರೋಹಿತ್ ಜೇಟ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ವಿಜಯ್ ಹಜಾರೆ ಟೂರ್ನಿಯಲ್ಲಿ ಡೆಲ್ಲಿ ತಂಡದ ಪಂದ್ಯಗಳು ಡಿಸೆಂಬರ್ 24ರಿಂದ ಆರಂಭವಾಗಲಿವೆ. ಲೀಗ್ ಹಂತದಲ್ಲಿ 7 ಪಂದ್ಯಗಳು ನಡೆಯಲಿದ್ದು, ಈ ಪೈಕಿ 4 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಜನವರಿಯಲ್ಲಿ ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿ ನಡೆಯೋದ್ರಿಂದ ಆರಂಭಿಕ 4 ಪಂದ್ಯಗಳಲ್ಲೇ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ಆಂಧ್ರಪ್ರದೇಶ, ಗುಜರಾತ್, ಸೌರಾಷ್ಟ್ರ, ಒಡಿಶಾ ಎದುರಿನ ಪಂದ್ಯಗಳಲ್ಲಿ ಕೊಹ್ಲಿ ಆಡೋ ಸಾಧ್ಯತೆಯಿದೆ.
ವಿಜಯ ಹಜಾರೆ ಪಂದ್ಯಗಳನ್ನ ಬೆಂಗಳೂರಿನ ದತ್ತುಪುತ್ರ ವಿರಾಟ್ ಕೊಹ್ಲಿ, ಸಿಲಿಕಾನ್ ಸಿಟಿಯಲ್ಲೇ ಆಡಲಿದ್ದಾರೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ 2 ಪಂದ್ಯಗಳನ್ನ ವಿರಾಟ್ ಕೊಹ್ಲಿ ಆಡಲಿದ್ದಾರೆ. ಇನ್ನುಳಿದ 2 ಪಂದ್ಯಗಳನ್ನ ಕೊಹ್ಲಿ ಪಾಲಿನ 2ನೇ ಹೋಮ್ಗ್ರೌಂಡ್ ಚಿನ್ನಸ್ವಾಮಿ ಮೈದಾನದಲ್ಲಿ ಕೊಹ್ಲಿ ಆಡಲಿದ್ದಾರೆ ಎನ್ನಲಾಗ್ತಿದೆ. ಆಲೂರಿನಲ್ಲಿ ಆಯೋಜನೆಯಾಗಿರೋ ಪಂದ್ಯಗಳನ್ನ ಚಿನ್ನಸ್ವಾಮಿ ಸ್ಟೇಡಿಯಂಗೆ ಶಿಫ್ಟ್ ಮಾಡೋ ಸಾಧ್ಯತೆಯಿದೆ.
ವಿಜಯ್ ಹಜಾರೆಯಲ್ಲಿ ಕೊಹ್ಲಿ
ವಿಜಯ್ ಹಜಾರೆ ಟೂರ್ನಿಯಲ್ಲಿ 10 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 819 ರನ್ಗಳಿಸಿದ್ದಾರೆ. ಬರೋಬ್ಬರಿ 68.25ರ ಸರಾಸರಿಯನ್ನ ಹೊಂದಿದ್ದು, 106.08ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಒಟ್ಟಿನಲ್ಲಿ ಸುದೀರ್ಘ ಅಂತರದ ಬಳಿಕ ಡೊಮೆಸ್ಟಿಕ್ ಕಣಕ್ಕೆ ಮರಳ್ತಾ ಇರೋ ವಿರಾಟ್ ಕೊಹ್ಲಿಯ ನಡೆ ನಾನು 2027ರ ವಿಶ್ವಕಪ್ ಆಡೇ ತೀರೋದು ಅನ್ನೋ ಸ್ಪಷ್ಟ ಸಂದೇಶವನ್ನಂತೂ ರವಾನಿಸಿದೆ.
ಕೊಹ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡ್ತಾ ಇದ್ರೂ, ವಿಶ್ವಕಪ್ ಆಡಬೇಕಂದ್ರೆ ನೀವು ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕು ಅನ್ನೋ ನಿಯಮವನ್ನ ಬಿಸಿಸಿಐ ತಂದಿದೆ. ಕೊಹ್ಲಿಯ ನಡೆ ನೀವು ಎಷ್ಟೇ ರೋಲ್ಸ್ ತನ್ನಿ, ಏನೇ ಮಾಡಿ 2027ರ ವಿಶ್ವಕಪ್ ಆಡೋಕೆ ನಾನು ಬದ್ಧ. ಅದಕ್ಕೆ ಏನು ಮಾಡೋಕೆ ಆದ್ರೂ ನಾನು ಸಿದ್ಧ ಎಂದು ಬಿಸಿಸಿಐ ಹಾಗೂ ಟೀಮ್ ಮ್ಯಾನೇಜ್ಮೆಂಟ್ಗೆ ಸಂದೇಶ ರವಾನಿಸಿದಂತಿದೆ.




