ಬೆಂಗಳೂರು, ಡಿಸೆಂಬರ್ 16: ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ (Bengaluru Air Quality) ಹಾಳಾಗುತ್ತಲೇ ಇದೆ. ಮೈಕೊರೆಯುವ ಚಳಿಯ ಜೊತೆಗೆ ಕಳಪೆ ಗುಣಮಟ್ಟದ ಗಾಳಿಯ ಸೇವನೆ ಜನರ ಬೆಂಗಳೂರಿಗರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಜನರ ಜೀವಕ್ಕೇ ಕುತ್ತು ತರುವ ಸಂಭವವಿದೆ ಎಂದು ತಜ್ಞರು ಹೇಳುತ್ತಾರೆ. ಈ ನಡುವೆ ಬೆಂಗಳೂರಿನ ಗಾಳಿಯ ಕ್ವಾಲಿಟಿ 184ಕ್ಕೆ ತಲುಪಿದ್ದು, ಇನ್ನೂ ಕುಸಿಯುವ ಸೂಚನೆಯಿದೆ.
ಬಳ್ಳಾರಿಯಲ್ಲಂತೂ 224ರ ಮಟ್ಟಿಗೆ ಕ್ವಾಲಿಟಿ ಕುಸಿತ
ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನ ಗಾಳಿಯ ಗುಣಮಟ್ಟ ಕುಸಿಯುತ್ತಿದ್ದು, ಶನಿವಾರ 206ಕ್ಕೆ ಇಳಿದಿತ್ತು. ಇದು ಬೆಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿತ್ತು. ಇಂದು ಈ ಗಾಳಿಯ ಗುಣಮಟ್ಟ ಸ್ವಲ್ಪ ಸುಧಾರಿಸಿಕೊಂಡಿದ್ದರೂ ಈ ಹಿಂದೆ ತಜ್ಞರು ಹೇಳಿದಂತೆ ಬೆಂಗಳೂರಿನ ಗಾಳಿಯ ಗುಣಮಟ್ಟ ಹೀಗೆ ಮುಂದುವರಿದರೆ ದೆಹಲಿಯ ಪರಿಸ್ಥಿತಿ ಎದುರಾಗಬಹುದು. ಬೆಂಗಳೂರು ಮಾತ್ರವಲ್ಲದೇ ಇತರ ಶಹರದಲ್ಲಿಯೂ ಕಳಪೆ ಗುಣಮಟ್ಟದ ಗಾಳಿಯ ಸಮಸ್ಯೆ ಎದುರಾಗಿದ್ದು, ಬಳ್ಳಾರಿಯಲ್ಲಂತೂ 224ರ ಮಟ್ಟಿಗೆ ಕ್ವಾಲಿಟಿ ಹಾಳಾಗಿದೆ. ನಿನ್ನೆಯೂ ಬಳ್ಳಾರಿಯಲ್ಲಿ ಏರ್ ಕ್ವಾಲಿಟಿ 173ರಷ್ಟಿತ್ತು.
ಹದಗೆಟ್ಟ ಗಾಳಿಯಿಂದ ಶ್ವಾಸಕೋಶ ಸಂಬಂಧಿ ಕಾಯಿಲೆ
ರಾಜ್ಯದೆಲ್ಲೆಡೆ ಉಂಟಾಗುತ್ತಿರುವ ಶೀತದಲೆಯ ಪರಿಣಾಮ ಈಗಾಗಲೇ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರಿಗೂ ಉಸಿರಾಟದ ಸಮಸ್ಯೆಗಳು ಎದುರಾಗುತ್ತಿವೆ. ಅದರೊಂದಿಗೆ ವಾಯು ಮಾಲಿನ್ಯ ಮತ್ತು ಹದಗೆಟ್ಟ ಗಾಳಿಯೂ ಸೇರಿ ಅನಾರೊಗ್ಯ ಉಂಟುಮಾಡಬಹುದೆಂದು ತಜ್ಞರು ಹೇಳುತ್ತಾರೆ. ಇಂದೂ ಬೆಂಗಳೂರಿನಲ್ಲಿ PM2.5 ಪ್ರಮಾಣ 104ಕ್ಕೆ ತಲುಪಿದ್ದು, PM10 ಪ್ರಮಾಣ 142ಕ್ಕೆ ಇಳಿದಿದೆ. ಈ ಎರಡರಿಂದಲೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಭಯ ಹೆಚ್ಚುತ್ತಿದ್ದು, ಜನರು WHO ಮಾರ್ಗಸೂಚಿಯನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ.





