ಪರಮೇಶ್ವರ್ ರಾಜ್ಯದ ಮುಖ್ಯಮಂತ್ರಿ ಆಗಲಿ: ಮಠಾಧೀಶರ ಒತ್ತಾಯ

Share with

ತುಮಕೂರು: ಸಜ್ಜರು, ವಿದ್ಯಾವಂತರು ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ನೇಮಕ ಮಾಡುವಂತೆ ಕಾಂಗ್ರೆಸ್ ಹೈ ಕಮಾಂಡ್‌ಗೆ ತುಮಕೂರು ಜಿಲ್ಲೆಯ ವಿವಿಧ ಮಠಾಧೀಶರು ಗುರುವಾರ ಒತ್ತಾಯಿಸಿದ್ದಾರೆ.

ನಗರದ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಮಠಾಧಿಪತಿಗಳು, ಪರಮೇಶ್ವರ್ ಅವರು ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ, ಎರಡು ಬಾರಿಯೂ ಪಕ್ಷವನ್ನು ಮುನ್ನೆಡೆಸಿ, ಒಮ್ಮೆ ಪೂರ್ಣ ಬಹುಮತದೊಂದಿಗೆ, ಮತ್ತೊಮ್ಮೆ ಜೆಡಿಎಸ್ ಪಕ್ಷದ ಸಹಕಾರದೊಂದಿಗೆ ಅಧಿಕಾರ ಹಿಡಿಯಲು ಕಾರಣಕರ್ತರಾಗಿದ್ದಾರೆ. ಅಲ್ಲದೆ, ಮೂರು ಬಾರಿ ಗೃಹ ಸಚಿವರಾಗಿ, ವಿವಿಧ ಮಂತ್ರಿ ಪದವಿಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ ಅವರನ್ನು ಪಕ್ಷದ ಹೈಕಮಾಂಡ್ ಮುಖ್ಯ ಮಂತ್ರಿಯಾಗಿ ಘೋಷಿಸಬೇಕು ಎಂದು ಹೇಳಿದರು.

ಗೃಹಮಂತ್ರಿಯಾಗಿರುವ ಡಾ.ಜಿ.ಪರಮೇಶ್ವರ್ ವಿದೇಶದಲ್ಲಿ ಕಲಿತರು, ದೇಶ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೂಲಕ ಒಂದೇ ಸೂರಿನಡಿ ಎಲ್.ಕೆ.ಜಿ.ಯಿಂದ ಪದವಿ, ಮೆಡಿಕಲ್, ಎಂಜಿನಿಯರಿಂಗ್ ವರೆಗೆ ಶಿಕ್ಷಣ ನೀಡುತ್ತಾ, ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ತುಮಕೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಯೋಜನೆಗಳ ಹಿಂದೆ ಡಾ.ಜಿ.ಪರಮೇಶ್ವರ್ ಅವರ ಶ್ರಮವಿದೆ. ದೂರದೃಷ್ಟಿಯುಳ್ಳ ಇಂತಹ ವ್ಯಕ್ತಿಗಳು ಮುಖ್ಯ ಮಂತ್ರಿಗಳಾದರೆ ರಾಜ್ಯ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ಹಾಗಾಗಿ ಪಕ್ಷದ ಹೈಕಮಾಂಡ್ ನಮ್ಮ ಒತ್ತಾಯಪೂರ್ವ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.


Share with

Leave a Reply

Your email address will not be published. Required fields are marked *