ಬೆಳೆವಿಮೆಯನ್ನೇ ನಂಬಿದ್ದ ಅಡಿಕೆ ಕೃಷಿಕರು ಆತಂಕದಲ್ಲಿದ್ದಾರೆ – ರೈ

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತ ನೀಡುವಲ್ಲಿ ಲೋಪವಾಗಿದೆ. ಈ ಲೋಪವನ್ನು ಸರಿಪಡಿಸಿ ವಿಮಾ ಮೊತ್ತವನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು ಇಲ್ಲವಾದರೆ ಕರಾವಳಿ ಜಿಲ್ಲೆಯ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಈ ವಿಚಾರದಲ್ಲಿ ಕೃಷಿಕರು ಆತಂಕದಲ್ಲಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ವಿಧಾನಸಭಾ ಅಧಿವೇಶನದಲ್ಲಿ ಅಡಿಕೆ ಕೃಷಿಕರ ಪರವಾಗಿ ಧ್ವನಿ ಎತ್ತಿದ್ದಾರೆ.
ಶುಕ್ರವಾರ(ಡಿ.19)ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ಮೊತ್ತದಲ್ಲಿ ಲೋಪವಾಗಿರುವ ಬಗ್ಗೆ ಮೊನ್ನೆಯ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ. ವಿಧಾನಸಭಾ ಅಧ್ಯಕ್ಷರ ನೇತೃತ್ವದಲ್ಲಿ ಕರಾವಳಿ ಭಾಗದ ಶಾಸಕರನ್ನು ಕರೆಸಿ ತೋಟಗಾರಿಕಾ ಸಚಿವರ ಜೊತೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದ್ದೆ ಆ ಪ್ರಕಾರ ಇದರ ಬಗ್ಗೆ ಚರ್ಚೆಯಾಗಲಿ. ಅಡಿಕೆಯನ್ನೇ ನಂಬಿ ಜೀವನ ಮಾಡುತ್ತಿರುವ ದ ಕ ಮತ್ತು ಉಡುಪಿ ಜಿಲ್ಲೆಯ ಕೃಷಿಕರಿಗೆ ಈ ಬಾರಿ ಅಡಿಕೆಗೆ ರೋಗಭಾದಿಸಿದ ಕಾರಣ ನಷ್ಟ ಅನುಭವಿಸುವಂತಾಗಿದೆ. ಬೆಳೆ ವಿಮೆಯನ್ನು ನಂಬಿ ಸಾಲ ಮಾಡಿ ಕೃಷಿ ಮಾಡಿದ್ದಾರೆ. ಕೆಲವರಿಗೆ ಅತ್ಯಂತ ಕಡಿಮೆ ವಿಮೆ ಮಂಜೂರಾಗಿದೆ ಅದನ್ನು ಸರಿಪಡಿಸಿ ಸರಿಯಾದ ಪ್ರಮಾಣದಲ್ಲಿ ವಿಮಾ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.




