ಕೊಟ್ಟಿಗೆಹಾರ: ಸ್ವಂತ ಕಾರಿಗೆ ಪೊಲೀಸ್ ಬೋರ್ಡ್ ಹಾಕಿಕೊಂಡು ಪ್ರವಾಸಕ್ಕೆ ಹೋದ ಪೊಲೀಸ್ ಸಿಬ್ಬಂದಿಗೆ ದಂಡ ಹಾಕಿ ಬೋರ್ಡ್ ತೆಗೆಸಿ ಮುಂದಕ್ಕೆ ಕಳಿಸಿದ ಘಟನೆ ಡಿ.25ರ ಗುರುವಾರ ನಡೆದಿದೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್‌ಪೋಸ್ಟ್ ಬಳಿ ಗುರುವಾರ ನಡೆದ ವಾಹನ ತಪಾಸಣೆ ಸಂದರ್ಭದಲ್ಲಿ ಸ್ವಂತ ಕಾರಿಗೆ ‘ಪೊಲೀಸ್’ (“POLICE”) ಬೋರ್ಡ್ ಅಳವಡಿಸಿಕೊಂಡು ಫ್ಯಾಮಿಲಿ ಜೊತೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಆ ಪೊಲೀಸ್ ವಾಹನವನ್ನು ತಡೆದ ಪಿಎಸೈ ದಂಡ ವಿಧಿಸಿದ ಘಟನೆ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.
ಧಾರವಾಡದಿಂದ ಧರ್ಮಸ್ಥಳಕ್ಕೆ ಕುಟುಂಬ ಸಮೇತ ತಮ್ಮ ಪ್ರೈವೇಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸ್ ಸಿಬ್ಬಂದಿ, ತಮ್ಮ ವಾಹನದ ಮುಂದೆ ‘ಪೊಲೀಸ್’ ಬೋರ್ಡ್ ಅಳವಡಿಸಿಕೊಂಡಿದ್ದರು.
ತಪಾಸಣೆ ವೇಳೆಯಲ್ಲಿ ಐಡಿ ಕಾರ್ಡ್ ತೋರಿಸಿದರೂ, ನಿಯಮಾತೀತವಾಗಿ ಪೊಲೀಸ್ ಬೋರ್ಡ್ ಬಳಸಿರುವುದರಿಂದ ಬಣಕಲ್ ಪಿಎಸೈ ರೇಣುಕಾ, ನಿಯಮ ಪ್ರಕಾರ ದಂಡ ವಿಧಿಸಿ, ಬೋರ್ಡ್ ತೆಗೆಸಿದ ನಂತರವೇ ವಾಹನವನ್ನು ಮುಂದಕ್ಕೆ ಕಳಿಸಿದರು.
ಪದೇ ಪದೇ ದುರುಪಯೋಗವಾಗುತ್ತಿರುವ ಪೊಲೀಸ್ ಬೋರ್ಡ್ ಬಳಕೆಗೆ ನಿಲ್ಲುವಂತೆ ಕ್ರಮ ಕೈಗೊಂಡ ಪಿಎಸೈ ರೇಣುಕಾ ಅವರ ನಡೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.




