ನವದೆಹಲಿ: ಪಾಕಿಸ್ಥಾನಿ ಸಂಘಟನೆಯೊಂದಿಗೆ ಸೇರಿದಂತೆ ತೀವ್ರಗಾಮಿ ಸಂಪರ್ಕ ಹೊಂದಿರುವ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ ಪ್ರಸ್ತುತ ಯುಕೆಯಲ್ಲಿ ನೆಲೆಸಿರುವ ಇಸ್ಲಾಂ ಧರ್ಮಗುರುವಿನ ವಿರುದ್ಧ ಹಣ ವರ್ಗಾವಣೆ ಪ್ರಕರಣ ದಾಖಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ.

ಮೌಲಾನಾ ಶಂಸುಲ್ ಹುದಾ ಖಾನ್ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇ ಡಿ ಪ್ರಕಾರ,ಶಂಸುಲ್ ಹುದಾ ಖಾನ್ ಅವರನ್ನು 1984 ರಲ್ಲಿ ಉತ್ತರ ಪ್ರದೇಶ ಸರ್ಕಾರಿ ಅನುದಾನಿತ ಮದರಸಾದಲ್ಲಿ ಸಹಾಯಕ ಶಿಕ್ಷಕರಾಗಿ ನೇಮಿಸಲಾಗಿತ್ತು. 2013 ರಲ್ಲಿ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾರೆಂದು ಆರೋಪಿಸಲಾಗಿದೆ. ಭಾರತೀಯ ಪ್ರಜೆಯಾಗಿಲ್ಲದಿದ್ದರೂ ಅಥವಾ ಬೋಧನಾ ಕರ್ತವ್ಯಗಳನ್ನು ನಿರ್ವಹಿಸದಿದ್ದರೂ ವಿದೇಶದಲ್ಲಿ ವಾಸಿಸುತ್ತಿದ್ದರೂ 2013-2017 ರವರೆಗೆ ಸಂಬಳ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಜೆನ್ಸಿಯ ಪ್ರಕಾರ, ಖಾನ್ ಕಳೆದ 20 ವರ್ಷಗಳಲ್ಲಿ ಹಲವಾರು ವಿದೇಶಗಳಿಗೆ ಪ್ರಯಾಣಿಸಿದ್ದು, ಭಾರತದಲ್ಲಿ ನಿರ್ವಹಿಸಲಾದ ಏಳರಿಂದ ಎಂಟು ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ಪಡೆದಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.




