ಕಾಸರಗೋಡು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ..; ಗರಿಷ್ಠ ಪ್ರಮಾಣದ ರೈಲು ಸೇವೆ..!

Share with

ಕಾಸರಗೋಡು: ಉತ್ತರ ಕೇರಳದ ಕೊನೆಯ ಜಿಲ್ಲಾ ಕೇಂದ್ರದಲ್ಲಿರುವ ಕಾಸರಗೋಡು ರೈಲು ನಿಲ್ದಾಣ ಮದುವೆ ಮನೆಯಂತೆ ಹೊಳೆಯುತ್ತಿದೆ! ಕೇಂದ್ರ ಸರಕಾರದ ಅಮೃತ ಭಾರತ ಯೋಜನೆಯ ಪ್ರಥಮ ಹಂತದಲ್ಲಿ 32.69 ಕೋಟಿ ರೂ. ಅನುಮೋದನೆ ಪಡೆದ ಕಾಸರಗೋಡು ರೈಲು ನಿಲ್ದಾಣದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.

ದಕ್ಷಿಣ ರೈಲ್ವೇ ಪಾಲಕ್ಕಾಡು ವಿಭಾಗದ ಹಿರಿಯ ಅಧಿಕಾರಿಗಳು ಹೇಳುವ ಪ್ರಕಾರ ಶೇ.92 ಕಾಮಗಾರಿ ನಡೆದಿದ್ದು, ಮುಂದಿನ 2-3 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ರೈಲು ನಿಲ್ದಾಣಕ್ಕೆ ಅಂದವಾದ ಮುಖಚರ್ಯೆ, ವಿಸ್ತಾರವಾದ ಪಾರ್ಕಿಂಗ್ ಪ್ರದೇಶ, ಲಿಫ್ಟ್, ದಿವ್ಯಾಂಗರಿಗೆ ಅನುಕೂಲಕರ ವ್ಯವಸ್ಥೆ, ವಿಐಪಿ ಲಾಂಜ್, ಪಾದಚಾರಿ ಸೇತುವೆ (ಎಫ್‌ಓಬಿ), ಪ್ರಯಾಣಿಕರಿಗೆ ಹೊಸ ವೈಟಿಂಗ್ ರೂಂ, ಲಗೇಜ್ ರೂಂ ಸೇರಿದಂತೆ ಇತ್ಯಾದಿ ಸೌಲಭ್ಯಗಳಿರಲಿವೆ.

ರೈಲು ನಿಲ್ದಾಣದ ಒಳಗೂ ಎಲ್ಲ ಕಡೆ ಹೊಳಪು ಕಾಣುತ್ತದೆ. ನಿಲ್ದಾಣದ ಆವರಣದಲ್ಲಿಯೇ ಅಚ್ಚುಕಟ್ಟಾದ ಆಟೋ, ಟ್ಯಾಕ್ಸಿ ನಿಲ್ದಾಣಗಳು ಇವೆ. ರೈಲು ನಿಲ್ದಾಣದ ಹೆಸರಿನಲ್ಲಿಯೇ ವಿಶಾಲವಾದ ಸುಂದರ ಬಸ್ ನಿಲ್ದಾಣವೊಂದು ರೈಲು ನಿಲ್ದಾಣದ ಎದುರು ನಿರ್ಮಾಣಗೊಳ್ಳುತ್ತಿದೆ. ಕಾಸರಗೋಡು ರೈಲು ನಿಲ್ದಾಣದ ಅಮೃತ ಭಾರತ ಯೋಜನೆ ಕಾಮಗಾರಿ 2024, ಜನವರಿಯಲ್ಲಿ ಪೂರ್ಣಗೊಳ್ಳಬೇಕಿತ್ತು ಆದರೆ ಕೆಲವು ಕಾರಣಾಂತರಗಳಿಂದ ವಿಳಂಬವಾಗಿದೆ.

ಗರಿಷ್ಠ ಪ್ರಮಾಣದ ರೈಲು ಸೇವೆ

ಕೇರಳ ಗರಿಷ್ಠ ಪ್ರಮಾಣದಲ್ಲಿ ರೈಲು ಸೇವೆಯನ್ನು ಬಳಸುವ ರಾಜ್ಯ. ಕಾಸರಗೋಡು ರೈಲು ನಿಲ್ದಾಣ ಜಿಲ್ಲಾ ಕೇಂದ್ರದಲ್ಲಿ ಇರುವುದು. ಇಲ್ಲಿಯ ಅಗತ್ಯಗಳನ್ನು ಗಮನಿಸಿದರೆ ಇರುವ ಸೌಲಭ್ಯ ಕಡಿಮೆ. ಜಿಲ್ಲೆಯ ಏಕೈಕ ‘ಬಿ’ ಗ್ರೇಡ್ ನಿಲ್ದಾಣವಾಗಿರುವ ಇಲ್ಲಿ ಇರುವುದು ಮೂರು ಫ್ಲಾಟ್ ಫಾರ್ಮ್ ಗಳು ಮಾತ್ರ. ಮಂಜೇಶ್ವರದಂತಹ ತಾಲೂಕು ಕೇಂದ್ರದ ನಿಲ್ದಾಣದಲ್ಲಿ ಕೂಡ ಮೂರು ಫ್ಲಾಟ್ ಫಾರ್ಮ್ ಇದೆ.

ದಿನಂಪ್ರತಿ 87 ರೈಲುಗಳು ಈ ನಿಲ್ದಾಣದಿಂದಲೇ ಹಾದು ಹೋಗುತ್ತವೆಯಾದರೂ ಲೋಕಲ್ ಪ್ಯಾಸೆಂಜ‌ರ್ ರೈಲುಗಳ ಕೊರತೆ ತುಂಬಾ ಇದೆ.

16 ರೈಲು ನಿಲ್ದಾಣಗಳಿಗೆ ವಿಶೇಷ ಅನುದಾನ

ಕೇರಳ ರಾಜ್ಯದ 16 ನಿಲ್ದಾಣಗಳಿಗೆ ಅಮೃತ ಭಾರತ ಯೋಜನೆ ವಿಶೇಷ ಅನುದಾನ ದೊರೆತ್ತಿದೆ. ಈ ಪೈಕಿ ಕಾಸರಗೋಡು ಸಹಿತ ಐದು ನಿಲ್ದಾಣಗಳ ಕಾಮಗಾರಿ ಪೂರ್ಣಗೊಳಿಸಿ ಶೀಘ್ರದಲ್ಲೇ ಉದ್ಘಾಟನೆಗೊಳಿಸಲು ತೀರ್ಮಾನಿಸಲಾಗಿತ್ತು. ಇದರಲ್ಲಿ ಕುಟ್ಟಿಪುರಂ, ಶೂರ್ನೂರು ಮತ್ತು ಪೊಲ್ಲಾಚಿ ನಿಲ್ದಾಣಗಳ ಕಾಮಗಾರಿ ಮಾತ್ರ ಮುಗಿದಿದ್ದು, ನವೀಕೃತ ನಿಲ್ದಾಣ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ವಡಗರ ಮತ್ತು ಮಾಹೆ ಕಾಮಗಾರಿ ಈಗಾಗಲೇ ಪೂರ್ತಿಯಾಗಿದೆ.

ಹೆಚ್ಚುವರಿ ಫ್ಲಾಟ್‌ಫಾರ್ಮ್ ಅಗತ್ಯವಿದೆ

ಕಾಸರಗೋಡು ನಿಲ್ದಾಣದಿಂದ ಮಂಗಳೂರು ಮತ್ತು ಕೋಕೋಡು ಕಡೆಗೆ ಹೆಚ್ಚಿನ ನಿಲ್ದಾಣಗಳಲ್ಲಿ ನಿಲುಗಡೆ ಇರುವ ಪ್ಯಾಸೆಂಜರ್‌ರೈಲುಗಳು ಬೇಕು ಎಂದು ತುಂಬಾ ಸಮಯದಿಂದ ಪ್ರಯತ್ನಿಸುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತುಕತೆ ನಡೆಸಿದ್ದೇವೆ. ನಿಲ್ದಾಣದಿಂದ ಹೆಚ್ಚುವರಿ ರೈಲು ಆರಂಭಿಸಲು ಅನುಕೂಲವಾಗುವಂತೆ ಇಲ್ಲಿ ಹೆಚ್ಚುವರಿ ಫ್ಲಾಟ್ ಫಾರ್ಮ್ ಕೂಡ ಅಗತ್ಯವಿದೆ –ಪ್ರಶಾಂತ್, ಅಧ್ಯಕ್ಷರು ಕಾಸರಗೋಡು, ರೈಲ್ವೆ ಪ್ಯಾಸೆಂಜರ್‌ಅಸೋಸಿಯೇಶನ್


Share with

Leave a Reply

Your email address will not be published. Required fields are marked *