ಬಂಟ್ವಾಳ : ಬಂಟ್ವಾಳ- ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆ ಪ್ರಾಥಮಿಕ ಅರೋಗ್ಯ ಕೇಂದ್ರದ ಸಮೀಪ ನಡೆದ ಬೈಕ್ ಹಾಗೂ ಕಾರು ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರ(ಡಿ.29) ಸಂಭವಿಸಿದೆ.

ಕುಕ್ಕಾಜೆ ನಿವಾಸಿ ಇಮ್ರಾನ್ ( 40) ಮೃತಪಟ್ಟವರು.
ಮೃತ ವ್ಯಕ್ತಿ ಟಾಟಾ ಕಂಪನಿಯ ಡಿಶ್ ರಿಪೇರಿ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಯ ನಿಮಿತ್ತ ತೆರಳಿದವರು ವಾಪಾಸು ಬಿ.ಸಿ.ರೋಡ್ ಕಡೆ ಬರುತ್ತಿದ್ದರು. ಮಂಗಳೂರು ಕಡೆಯಿಂದ ಪೊಲೀಸ್ ಓರ್ವರು ಚಲಾಯಿಸುತ್ತಿದ್ದ ನ್ಯಾನೋ ಕಾರ್ ನಿಯಂತ್ರಣ ತಪ್ಪಿ ಹೆಗ್ಗಡೆಬೆಟ್ಟು ಮನೆ ಬಳಿ ಬೈಕ್ ಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಇಮ್ರಾನ್ ಬೈಕ್ ನಿಂದ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೂಲತಃ ಮಾರ್ನಬೈಲ್ ನವರಾದ ಅವರು ಕುಕ್ಕಾಜೆಯಲ್ಲಿ ಮನೆ ನಿರ್ಮಿಸಿದ್ದರು. ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.




