ಹೊಸ ವರ್ಷಾಚರಣೆಗೆ ಪೊಲೀಸರ ಕಟ್ಟೆಚ್ಚರ! ವ್ಯಾಪಕ ಬಂದೋಬಸ್ತ್.. ಅನುಮತಿ ಪಡೆದವರಿಗೆ ಮಾತ್ರ ಅವಕಾಶ..!

Share with

ಮಂಗಳೂರು: ಹೊಸ ವರ್ಷಾಚರಣೆಯ ಸಂಭ್ರಮಕ್ಕಾಗಿ ಜಿಲ್ಲೆ ಸನ್ನದ್ಧವಾಗಿದ್ದು, ಅಪಾರ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಪೊಲೀಸ್ ಇಲಾಖೆ ಕೆಲವೊಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು ಸುಗಮ ವ್ಯವಸ್ಥೆ ಕಲ್ಪಿಸಲು ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದಾರೆ.

ಈಗಾಗಲೇ ಜಿಲ್ಲೆಯ ವಿವಿಧ ಬೀಚ್ ರೆಸಾರ್ಟ್, ಹೋಮ್ ಸ್ಟೇ, ಹೊಟೇಲ್, ಲಾಡ್ಜ್ ಗಳು ಬುಕ್ಕಿಂಗ್ ಆಗಿದ್ದು, ಪ್ರವಾಸಿಗರ ದಂಡೇ ಕರಾವಳಿಯತ್ತ ಆಗಮಿಸುತ್ತಿದೆ. ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಈಗಾಗಲೇ ಹೊರ ದೇಶ, ರಾಜ್ಯ, ಜಿಲ್ಲೆಗಳಿಂದ ಸಾಕಷ್ಟು ಮಂದಿ ಕರಾವಳಿಗೆ ಬಂದಿದ್ದು, ಹೊಸ ವರ್ಷಾಚರಣೆ ಮುಗಿಸಿಯೇ ಹೊರಡುವ ಕಾರಣದಿಂದ ಎಲ್ಲಡೆ ವಾಹನ ದಟ್ಟಣೆಯೂ ಹೆಚ್ಚಾಗಿದೆ. ರಾ.ಹೆ. 66ರಲ್ಲಿ ಕೇರಳ ಕರ್ನಾಟಕ-ಗೋವಾ- ಮಹಾರಾಷ್ಟ್ರ ನಡುವೆ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಅದೇ ರೀತಿ ಬೆಂಗಳೂರು- ಮಂಗಳೂರು ಹೆದ್ದಾರಿಯಲ್ಲೂ ವಾಹನ ಸಂಚಾರ ಹೆಚ್ಚಾಗಿದೆ.

ಡಿ. 31ರ ಮಧ್ಯಾಹ್ನದಿಂದ ವಿವಿಧೆಡೆ ಹೆಚ್ಚುವರಿ ಬಂದೋಬಸ್ತ್ ಕೈಗೊಳ್ಳಲಾಗು ತ್ತದೆ. ತಪಾಸಣೆ, ಪ್ರಮುಖ ಪಾಯಿಂಟ್‌ಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು, ಕೆಎಸ್‌ಆರ್‌ಪಿ, ಸಿಎಆರ್, ಡಿಎಆರ್‌ತುಕಡಿ ನಿಯೋಜಿಸಲಾಗುವುದು. ಹೆಚ್ಚುವರಿ ಚೆಕ್‌ಪೋಸ್ಟ್‌ಗಳನ್ನು ರಚಿಸಿ ವಿಶೇಷ ತಪಾಸಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಅನುಮತಿ ಪಡೆದವರಿಗೆ ಮಾತ್ರ ಅವಕಾಶ

ಪೊಲೀಸ್‌ ಆಯುಕ್ತರ ಕಚೇರಿಯಿಂದ ಅನುಮತಿ ಪಡೆದ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಇತರ ಸಂಸ್ಥೆಗಳಲ್ಲಿ ಮಾತ್ರ ಹೊಸ ವರ್ಷಾಚರಣೆಯ ಕಾರ್ಯಕ್ರಮ ಆಯೋಜಿಸಲು ಅವಕಾಶವಿದೆ. ಪೂರ್ವ ಅನುಮತಿ ಪಡೆಯದೆ ಯಾವುದೇ ಸ್ಥಳದಲ್ಲಿ ಜನರನ್ನು ಸೇರಿಸಿ, ಹೊಸ ವರ್ಷದ ಆಚರಣೆ ಮಾಡಲು ಅವಕಾಶವಿಲ್ಲ. ಪೊಲೀಸ್ ನಿರ್ದೇಶನ ಉಲ್ಲಂ ಸಿ ಆಯೋಜನೆ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

12.30ಕ್ಕೆ ಅಂತ್ಯ- ಡಿಜೆ ನಿಷೇಧ

ಹೊಸ ವರ್ಷ ಆಚರಣೆಯ ಕಾರ್ಯಕ್ರಮ ರಾತ್ರಿ 12.30ರ ಒಳಗಾಗಿ ಪೂರ್ಣಗೊಳ್ಳಬೇಕು. ಧ್ವನಿ ಬೆಳಕು ವ್ಯವಸ್ಥೆಗಳು, ಲೌಡ್ ಸ್ಪೀಕರ್‌ಗಳನ್ನು ಬಳಸಲು ಸಂಬಂಧ ಪಟ್ಟ ಪ್ರಾಧಿಕಾರದಿಂದ ಪೂರ್ವ ಅನುಮತಿ ಪಡೆದಿರಬೇಕು. ಮಕ್ಕಳು, ಹಿರಿಯರು, ರೋಗಿಗಳಿಗೆ ಸಮಸ್ಯೆಯಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಡಿಜೆ ಬಳಕೆಯನ್ನುಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಡ್ರಗ್ಸ್ ಬಳಕೆ: ನಿಗಾ

ಹೊಸ ವರ್ಷದ ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ಬಳಕೆಯ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಮಾದಕ ವಸ್ತುಗಳ ಮಾರಾಟ, ಸಾಗಾಟದ ಬಗ್ಗೆ ಕಣ್ಣಾವಲು ಇರಿಸಲಾಗಿದೆ. ಅನುಮಾನಾಸ್ಪದವಾಗಿ ವರ್ತಿಸುವವರನ್ನು ತಪಾಸಣೆಗೆ ಒಳ ಪಡಿಸಲಾಗುತ್ತದೆ. ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾದರೆ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮದ್ಯ ಮಾರಾಟ ಮತ್ತು ವಿತರಣೆಗೆ ಅಬಕಾರಿ ಇಲಾಖೆಯಿಂದ ಪ್ರತ್ಯೇಕವಾಗಿ ಅನುಮತಿ ಅಗತ್ಯ.

ಸುರಕ್ಷತ ಕ್ರಮ ಪಾಲನೆ ಅಗತ್ಯ

ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಆಯೋಜಕರು ಅಗತ್ಯ ಮುನ್ನೆಚ್ಚರಿಕ ಕ್ರಮ ಕೈಗೊಳ್ಳಬೇಕು. ಅಗ್ನಿನಂದಕ ಸಾಧನಗಳು, ತುರ್ತು ವೈದ್ಯಕೀಯ ಸೇವಾ ವಾಹನ, ಅಗತ್ಯ ಭದ್ರತಾ ವ್ಯವಸ್ಥೆ ಮಾಡಬೇಕು. ಸಾರ್ವಜನಿಕ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಗಳನ್ನು ಕೈಗೊಳ್ಳುವುದು ಕೈಗೊಳ್ಳಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

ವಿಶೇಷ ಕಾರ್ಯಪಡೆ ನಿಯೋಜನೆ

ಸಂಭ್ರಮಾಚರಣೆಯ ಹೆಸರಿನಲ್ಲಿ ಮಹಿಳೆಯರನ್ನು ಚುಡಾಯಿಸುವ, ಕಿರುಕುಳ, ಹಿಂಸಾಚಾರ ಅಥವಾ ಅಶ್ಲೀಲ ಚಟುವಟಿಕೆ ತಡೆಹಿಡಿಯಲು ವಿಶೇಷ ಕಾರ್ಯಪಡೆ ಸಿಬಂದಿಯನ್ನು ವಿವಿಧೆಡೆ ನಿಯೋಜಿಸಲಾಗುತ್ತದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾ ವಹಿಸಲು ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಾನೂನು ಕ್ರಮ ಸಹಿತ ವಾಹನ ಮುಟ್ಟುಗೋಲು ಹಾಕಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


Share with

Leave a Reply

Your email address will not be published. Required fields are marked *