ಕಾಸರಗೋಡು: ಕುಂಬಡಾಜೆ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಪುಷ್ಪಲತಾ ವಿ ಶೆಟ್ಟಿ ಕೊಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.

ಬದಿಯಡ್ಕ ಪಂಚಾಯತ್ ನ ಪೆರ್ಡಾಲ ಮೂಲದ 47 ವರ್ಷದ ಪರಮೇಶ್ವರ ಅಲಿಯಾಸ್ ರಮೇಶ್ ನಾಯಕ್ ಬಂಧಿತ ಆರೋಪಿ. ಮೊಲ್ವಾರ್ ಗ್ರಾಮದ ಅಜಿಲದಲ್ಲಿರುವ ತಮ್ಮ ಮನೆಯಲ್ಲಿ ಪುಷ್ಪಲತಾ ಶೆಟ್ಟಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಜ.14 ರಂದು ಬೆಳಿಗ್ಗೆ ಪುಷ್ಪಲತಾ ಶವವಾಗಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ, ಕೈಯಿಂದ ಉಸಿರುಗಟ್ಟಿಸಿ ಆಕೆಯನ್ನು ಕೊಲ್ಲಲಾಗಿದೆ ಎಂಬುದು ತಿಳಿದುಬಂದಿತ್ತು. ತನಿಖೆ ಆರಂಭಿಸಿದ ಪೊಲೀಸರು, ಆ ಪರಿಸರದಲ್ಲಿ ಹಾದುಹೋದ ಜನರನ್ನು ವಿಚಾರಣೆ ನಡೆಸಿದ್ದಾರೆ. ಆರೋಪಿ ರಮೇಶ್ ನಾಯಕ್ ಆ ಪ್ರದೇಶದಲ್ಲಿ ಹುಲ್ಲು ಕಟ್ಟಿಂಗ್ ಮಾಡುತ್ತಿದ್ದದ್ದನ್ನು ಹಲವರು ನೋಡಿದ್ದರು. ಈ ಆಧಾರದಲ್ಲಿ ರಮೇಶ್ ನಾಯಕ್ ನನ್ನು ವಿಚಾರಣೆಗೊಳಪಡಿಸಲಾಗಿದೆ. ಇನ್ನು ಆತನ ಮೈಮೇಲೆ ಹಲವು ಕಡೆಗಳಲ್ಲಿ ಗಾಯಗಳಿರುವ ಬಗ್ಗೆ ಕೇಳಿದಾಗ ಅದು ಕಾಳುಮೆಣಸು ಕೀಳುವ ವೇಳೆ ಆಗಿದ್ದು ಎಂದು ಸುಳ್ಳು ಹೇಳಿದ್ದ. ವಿಚಾರಣೆ ತೀವ್ರಗೊಳಿಸಿದಾಗ ಕೊಲೆ ಮಾಡಿರುವ ವಿಚಾರ ರಮೇಶ್ ಬಾಯ್ದಿಟ್ಟಿದ್ದಾನೆ.
ರಮೇಶ್ ನಾಯಕ್ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು ಮನೆ ಕಟ್ಟಲು ಭೂಮಿ ಖರೀದಿಸಲು ಸುಮಾರು 8 ಲಕ್ಷ ಸಾಲ ಮಾಡಿದ್ದ. ಈ ಹಿನ್ನಲೆ ಹಣಕ್ಕಾಗಿ ಪುಷ್ಪಲತಾ ಧರಿಸಿದ್ದ ಚಿನ್ನದ ಕರಿಮಣಿ ಸರವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಆಕೆ ವಿರೋಧಿಸಿದಾಗ, ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಸುಮಾರು 28 ಗ್ರಾಂನ ಕರಿಮಣಿ ಸರ ಕದ್ದಿದ್ದ ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ.




