ಹುಳ ತಿನ್ನುತ್ತಾರಂತೆ ಪ್ರಿಯಾಂಕಾ ಚೋಪ್ರಾ: ಅದೂ ಯಾವ ಹುಳ ಗೊತ್ತೆ?

Share with

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್ ತ್ಯಜಿಸಿ ಹಾಲಿವುಡ್ಗೆ ಹಾರಿ ವರ್ಷಗಳೇ ಆಗಿವೆ. ಆದರೆ ಇದೀಗ ‘ವಾರಣಾಸಿ’ ಸಿನಿಮಾ ಮೂಲಕ ಸುಮಾರು ಆರೇಳು ವರ್ಷಗಳ ಬಳಿಕ ಮತ್ತೆ ಭಾರತೀಯ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಪ್ರಿಯಾಂಕಾ ಚೋಪ್ರಾ ನಟಿಸಿರುವ ಹಾಲಿವುಡ್ ಆಕ್ಷನ್ ಸಿನಿಮಾ ‘ದಿ ಬ್ಲಫ್’ ಬಿಡುಗಡೆ ಆಗಿದೆ. ಸಿನಿಮಾ ಅಮೆಜಾನ್ ಪ್ರೈಂನಲ್ಲಿ ನೇರವಾಗಿ ಬಿಡುಗಡೆ ಆಗಿದ್ದು, ನಂಬರ್ 1 ಸಿನಿಮಾ ಆಗಿ ಟ್ರೆಂಡ್ ಆಗುತ್ತಿದೆ. ಸಿನಿಮಾದ ಪ್ರಚಾರಕ್ಕೆಂದು ಹಾಲಿವುಡ್ನ ಜನಪ್ರಿಯ ಟಾಕ್ ಶೋ ಒಂದರಲ್ಲಿ ಪ್ರಿಯಾಂಕಾ ಭಾಗಿ ಆಗಿದ್ದರು. ಈ ವೇಳೆ ಪ್ರಿಯಾಂಕಾ ಚೋಪ್ರಾ ತಾವು ಹುಳ ತಿನ್ನುವುದಾಗಿ ಹೇಳಿಕೊಂಡಿದ್ದಾರೆ.

ಜಿಮ್ಮಿ ಫ್ಯಾಲನ್ ನಡೆಸಿಕೊಡುವ ಜನಪ್ರಿಯ ಟಾಕ್ ಶೋಗೆ ಪ್ರಿಯಾಂಕಾ ಹೋಗಿದ್ದರು. ಅಲ್ಲಿ ಜಿಮ್ಮಿ ಫ್ಯಾಲನ್ ಜೊತೆಗೆ ‘ಬ್ಲಫ್’ ಗೇಮ್ ಒಂದನ್ನು ಅವರು ಆಡಿದರು. ಅದರ ಪ್ರಕಾರ, ಪ್ರಿಯಾಂಕಾ ಮೂರು ಹೇಳಿಕೆಗಳನ್ನು ತಮ್ಮ ಜೀವನದ ಬಗ್ಗೆ ನೀಡಬೇಕು ಅದರಲ್ಲಿ ನಿಜ ಯಾವುದು ಸುಳ್ಳು ಯಾವುದು ಎಂಬುದನ್ನು ಜಿಮ್ಮಿ ಊಹಿಸಬೇಕು. ಅದರಂತೆ ಪ್ರಿಯಾಂಕಾ, ‘ತಮ್ಮ ಬಳಿ ವಿಮಾನ ಓಡಿಸುವ ಲೈಸೆನ್ಸ್ ಇದೆ’ ಎಂದರು. ಅದಕ್ಕೆ ಜಿಮ್ಮಿ ಇದು ನಿಜ ಎಂದರು. ಬಳಿಕ ಪ್ರಿಯಾಂಕಾ, ‘ನಾನು ಹುಳ ತಿನ್ನುತ್ತೇನೆ’ ಎಂದರು. ಅದಕ್ಕೆ ಜಿಮ್ಮಿ ಇದು ಸುಳ್ಳು ಎಂದರು. ಬಳಿಕ ಪ್ರಿಯಾಂಕಾ ‘ನಾನು ನನ್ನ ಕಪ್ಪು ಗುಡ್ಡೆಗಳನ್ನು ಪ್ರತ್ಯೇಕವಾಗಿ ಚಲಿಸುವಂತೆ ಮಾಡಬಲ್ಲೆ’ ಎಂದರು. ಅದಕ್ಕೆ ಜಿಮ್ಮಿ, ಹಾಗೆ ಮಾಡಲು ಯಾವ ಮನುಷ್ಯನ ಕೈಯಲ್ಲೂ ಆಗಲ್ಲ, ಅದು ಸುಳ್ಳು ಎಂದರು.

ಆದರೆ ಪ್ರಿಯಾಂಕಾ ಹೇಳಿದ ಮೊದಲನೇಯದ್ದು ಸುಳ್ಳು, ಇನ್ನೆರಡು ಹೇಳಿಕೆಗಳು ಸತ್ಯವಾಗಿದ್ದವು. ಪ್ರಿಯಾಂಕಾ ಬಳಿಕ ವಿಮಾನ ಚಲಾಯಿಸಲು ಪರವಾನಗಿ ಇಲ್ಲ. ಎರಡನೇ ಹೇಳಿಕೆಯಾದ ಹುಳ ತಿನ್ನುವ ಹೇಳಿಕೆ ನಿಜವೆಂದು ಸ್ವತಃ ಪ್ರಿಯಾಂಕಾ ಹೇಳಿದರು. ಅವರು ಜಿಂಬಾಬ್ವೆಗೆ ಹೋದಾಗ ಅಲ್ಲಿನ ಜನಪ್ರಿಯ ಆಹಾರ ಆಗಿರುವ ಮೊಪಾನಿ ಹುಳ (ಮೊಪಾನಿ ವರ್ಮ್ಸ್) ಅನ್ನು ತಿಂದಿದ್ದರಂತೆ. ಮಾತ್ರವಲ್ಲದೆ ಶೀಘ್ರವೇ ಅವರು ಮತ್ತೊಮ್ಮೆ ಜಿಂಬಾಬ್ವೆಗೆ ಹೋಗಲಿದ್ದು ಅವರು ಮತ್ತೊಮ್ಮೆ ಆ ಮೊಪಾನಿ ವರ್ಮ್ಸ್ ನಿಂದ ಮಾಡಿದ ಆಹಾರ ಸವಿಯಲಿದ್ದಾರಂತೆ. ಅಸಲಿಗೆ ಮೊಪಾನಿ ಹುಳ ರೇಷ್ಮೆ ಹುಳುವಿನ ರೀತಿಯೇ ಇರುತ್ತದೆ. ಆದರೆ ಆಕಾರದಲ್ಲಿ ದೊಡ್ಡದಾಗಿರುತ್ತದೆ. ಜಿಂಬಾಬ್ವೆಯ ಪ್ರಮುಖ ಮತ್ತು ವಿಶೇಷ ಆಹಾರಗಳಲ್ಲಿ ಇದು ಸಹ ಒಂದಾಗಿದೆ.

ಇನ್ನು ಕೊನೆಯ ಹೇಳಿಕೆ ಸಹ ನಿಜವಾಗಿದ್ದು, ಪ್ರಿಯಾಂಕಾ ತಮ್ಮ ಕಣ್ಣು ಗುಡ್ಡೆಗಳನ್ನು ಪ್ರತ್ಯೇಕವಾಗಿ ಚಲಿಸುವಂತೆ ಮಾಡಬಲ್ಲರು, ಅಸಲಿಗೆ ತಮ್ಮ ಆ ‘ಪ್ರತಿಭೆ’ಯನ್ನು ಜಿಮ್ಮಿ ಫ್ಯಾಲನ್ ಶೋನಲ್ಲಿ ಮಾಡಿ ತೋರಿಸಿದರು. ಪ್ರಿಯಾಂಕಾರ ಕಣ್ಣು ಗುಡ್ಡೆಗಳನ್ನು ನೋಡಿ ಜಿಮ್ಮಿ ಫ್ಯಾಲನ್ ಶಾಕ್ ಆದರು.

ಪ್ರಿಯಾಂಕಾ ಚೋಪ್ರಾ ನಟನೆಯ ‘ದಿ ಬ್ಲಫ್’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದ್ದು, ಪ್ರಿಯಾಂಕಾ ಸಖತ್ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ಅವರು ಪೈರೇಟ್ (ಸಮುದ್ರ ಲೂಟಿಕೋರರು) ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ‘ವಾರಣಾಸಿ’ ಸಿನಿಮಾನಲ್ಲಿಯೂ ಪ್ರಿಯಾಂಕಾ ನಟಿಸುತ್ತಿದ್ದು, ಸಿನಿಮಾದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.


Share with

Leave a Reply

Your email address will not be published. Required fields are marked *